ಉಡುಪಿ| ಮುಂದುವರಿದ ಸಾಧಾರಣ ಮಳೆ; ಮೂರು ಮನೆಗಳಿಗೆ ಹಾನಿ
ಉಡುಪಿ, ಜೂ.13: ಮುಂಗಾರು ರಾಜ್ಯ ಕರಾವಳಿಯನ್ನು ಪ್ರವೇಶಿಸಿ ವಾರ ಕಳೆದರೂ ಇನ್ನೂ ನಿರೀಕ್ಷಿತ ಪ್ರಮಾಣ ದಲ್ಲಿ ಮಳೆಯಾಗುತ್ತಿಲ್ಲ. ಕ್ಷೀಣಿಸಿದ ಮುಂಗಾರು ನಡುವೆ ರೈತ ಈ ಬಾರಿ ಬೇಸಾಯದ ಚಿಂತೆ ನಡುವೆ ಗದ್ದೆಗೆ ಇಳಿದಿ ದ್ದಾನೆ. ರೈತ ಬೇಸಾಯಕ್ಕೆ ಬೇಕಾದ ಪೂರ್ವಸಿದ್ಧತೆ ನಡೆಸುತಿದ್ದರೂ ಮಳೆ ಮಾತ್ರ ಆಶಾದಾಯಕವಾಗಿ ಇನ್ನೂ ಸುರಿಯಲು ಪ್ರಾರಂಭಿಸಿಲ್ಲ.
ಈ ನಡುವೆ ಮುಂದುವರಿದ ಸಾಧಾರಣ ಮಳೆಯ ನಡುವೆ ಗಾಳಿ-ಮಳೆಗೆ ಮೂರು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಬ್ರಹ್ಮಾವರದ ಹೊಸೂರು ಗ್ರಾಮದ ಸರೋಜಿನಿ ಆಚಾರ್ತಿ ಅವರ ಮನೆ ಮಳೆಯಿಂದ ಭಾಗಶ: ಹಾನಿಯಾ ಗಿದ್ದು 30ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಇನ್ನು ಹಳವಳ್ಳಿ ಗ್ರಾಮದ ಅಣ್ಣಯ್ಯ ಆಚಾರಿ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಪ್ರಾಥಮಿಕ ವರದಿ ಗಳಂತೆ 25,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಮಂಜು ಪೂಜಾರಿ ಅವರ ಮನೆ ಮೇಲೆ ಮರಬಿದ್ದು 50,000ರೂ.ನಷ್ಟ ಸಂಭವಿಸಿದೆ.
ಈ ನಡುವೆ ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದಲ್ಲಿ ಕಳೆದ ಮಂಗಳವಾರ ಬೆಳಗ್ಗೆ ತಾಯಿಯ ಕೈಯಲ್ಲಿದ್ದ ಒಂದೂವರೆಗೆ ವರ್ಷ ಪ್ರಾಯದ ಮಗು ದಕ್ಷ ಪೂಜಾರಿ ತಲೆ ಮೇಲೆ ಮೇಲೆ ತೆಂಗಿನಮರದಿಂದ ಕಾಯಿ ಯೊಂದು ಬಿದ್ದು, ತೀವ್ರವಾಗಿ ಗಾಯಗೊಂಡ ಮಗು ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆಯನ್ನು ಪ್ರಾಕೃತಿಕ ವಿಕೋಪದಡಿ ಪರಿಗಣಿಸಲಾಗಿದೆ. ಈ ಕುರಿತು ಬ್ರಹ್ಮಾವರ ತಹಶೀಲ್ದಾರರ ವರದಿಯಂತೆ ಮಗುವಿನ ಕುಟುಂಬಕ್ಕೆ ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 14.4 ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ 21.7, ಕಾಪುವಿನಲ್ಲಿ 18.7, ಬೈಂದೂರಿನಲ್ಲಿ 16.2, ಉಡುಪಿಯಲ್ಲಿ 13.9, ಕಾರ್ಕಳದಲ್ಲಿ 11.3, ಬ್ರಹ್ಮಾವರದಲ್ಲಿ 8.8, ಹೆಬ್ರಿಯಲ್ಲಿ 6.4ಮಿ.ಮೀ.ಮಳೆಯಾದ ವರದಿ ಬಂದಿದೆ.
ಮಳೆಯಿಂದ ರಾಡಿಯಾದ ಕುಂದಾಪುರದ ಶನಿವಾರ ಸಂತೆ!
ಕುಂದಾಪುರ: ಒಂದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾಪುರದ ಶನಿವಾರ ಸಂತೆ ಸಂಪೂರ್ಣ ರಾಡಿಯಾಗಿದೆ. ಇಲ್ಲಿನ ಚರಂಡಿ ದುರವಸ್ಥೆ, ಅಸಮರ್ಪಕ ನಿರ್ವಹಣೆಯಿಂದ ಮಳೆ ನೀರು ನಿಂತು ಸಂತೆಗೆ ಬಂದ ಜನರು, ವರ್ತಕರು ಹೈರಾಣಾಗುವಂತಾಗಿತ್ತು.
ಪ್ರತಿ ವರ್ಷ ಮಳೆಗಾಲದಲ್ಲಿ ಕುಂದಾಪುರದ ಪ್ರಸಿದ್ಧ ಸಂತೆ ಮಾರುಕಟ್ಟೆ ಯಲ್ಲಿ ಮಳೆ ನೀರಿನ ಸಮಸ್ಯೆ ಕಾಡುತ್ತಲೇ ಇರುತ್ತದೆ. ಕೆಸರು, ನೀರು ನಿಂತು ಸುಗಮ ವ್ಯಾಪಾರಕ್ಕೆ ಅಡಚಣೆಯಾಗುತ್ತದೆ. ಆದರೆ ಅದಕ್ಕೊಂದು ಪರಿಹಾರ, ಸರಿಯಾದ ವ್ಯವಸ್ಥೆ ಇನ್ನೂ ಮಾಡಲು ಪುರಸಭೆಗೆ ಸಾಧ್ಯವಾಗಿಲ್ಲ.
ಇನ್ನು ಸಂತೆ ಮಾರುಕಟ್ಟೆ ಹೊರಭಾಗದ ಸರ್ವೀಸ್ ರಸ್ತೆ ಸಮೀಪ ದೊಡ್ಡದೊಂದು ಚರಂಡಿ ಮೇಲಿನ ಹಾಸು ಇಲ್ಲದಿದ್ದು ಕಂದಕದಂತಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ಬೈಂದೂರು, ಕುಂದಾಪುರ ತಾಲೂಕಿನಾದ್ಯಂತ ಮಳೆ ಪ್ರಮಾಣ ಜಾಸ್ತಿಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳಲ್ಲಿ ಮಳೆ ನೀರು ನಿಂತು ಕೃತಕ ಕೆರೆ ಸೃಷ್ಟಿಯಾದ ಬಗ್ಗೆ ವರದಿಯಾಗಿದೆ.