ಗಂಗೊಳ್ಳಿ: ಯಕ್ಷಗಾನ ಕಲಾರಂಗದ 98ನೇ ಮನೆ ಹಸ್ತಾಂತರ
ಉಡುಪಿ, ಜೂ.13: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮನೀಷಾ ಖಾರ್ವಿ ಇವರ ಬಡ ಕುಟುಂಬಕ್ಕೆ ಮುಂಬಯಿಯ ಉದ್ಯಮಿ, ದಾನಿ ಆರ್.ಸುಂದರ ರಾವ್ ತನ್ನ ತಂದೆ-ತಾಯಿಯರ ನೆನಪಿ ನಲ್ಲಿ ಗಂಗೊಳ್ಳಿಯಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಶ್ರೀರಾಘವೇಂದ್ರ ನಿಲಯ’ವನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ಗಂಗೊಳ್ಳಿಯ ಮಂಜುನಾಥ ಖಾರ್ವಿ ಹಾಗೂ ಅನಿತಾ ದಂಪತಿ ಪುತ್ರಿ ಮನೀಷಾ ಅವರು ಎಸೆಸೆಲ್ಸಿಯಲ್ಲಿ ಶೇ.95 ಹಾಗೂ ಪ್ರಥಮ ಪಿಯುಸಿಯಲ್ಲಿ ಶೇ.97 ಅಂಕ ಗಳಿಸಿದ್ದಾಳೆ. ಮುಂಬಯಿಯ ಆರ್.ಸುಂದರ ರಾವ್ ಹಾಗೂ ಸೊಸೆ ಪ್ರೇಮಾ ಅವರ ಪ್ರಾಯೋಜಕತ್ವದಲ್ಲಿ ತನ್ನ ಮಾತಾ-ಪಿತೃಗಳಾದ ರಾಘವೇಂದ್ರ ರಾವ್ ಹಾಗೂ ಜಲಜಾಕ್ಷಿ ಸ್ಮರಣೆಯಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದು, ಇದರ ಉದ್ಘಾಟನೆ ಇಲ್ಲಿ ನಡೆಯಿತು.
ಮನೆಯನ್ನು ಉದ್ಘಾಟಿಸಿದ ಸುಂದರ ರಾವ್ ಮಾತನಾಡಿ, ನನ್ನ ತಂದೆ ಕಡು ಬಡತನದಲ್ಲಿ ಮುಂಬೈಗೆ ಹೋಗಿ ಹೋಟೆಲ್ ಆರಂಭಿಸಿದ್ದನ್ನು ಸ್ಮರಿಸಿಕೊಂಡರು. ಪರೋಪಕಾರಿಯಾಗಿದ್ದ ಅವರ ಸ್ಮರಣೆಯಲ್ಲಿ ಬಡವರಿಗೆ ಸಹಾಯ ಮಾಡಬೇಕೆಂಬ ಅಪೇಕ್ಷೆಯಂತೆ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ವಿದ್ಯಾಪೋಷಕ್ ಬಡ ವಿದ್ಯಾರ್ಥಿಗಳಿಗೆ ಮನೆ ಕಟ್ಟಿಸಿ ಕೊಡುವ ವಿಷಯ ತಿಳಿದಿದ್ದು, ನಮ್ಮ ಸಹಾಯ ಸತ್ಪಾತ್ರಕ್ಕೆ ಸಂದಾಯವಾದುದಕ್ಕೆ ಸಂತೋಷಗೊಂಡಿದ್ದೇವೆ ಎಂದರು.
ಕೊಲೆಕಾಡಿಯ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಶುಭಾಶಂಸನೆ ಮಾಡಿದರು. ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯರು ದಿನದ ಇಪ್ಪತ್ನಾಲ್ಕು ಗಂಟೆಯೂ ಕಲೆ, ಸಮಾಜ, ಶಿಕ್ಷಣಕ್ಕಾಗಿ ಯೋಚಿ ಸುತ್ತಾ ಕೆಲಸ ಮಾಡುವ ಇಂತಹ ಇನ್ನೊಂದು ಸಂಸ್ಥೆಯನ್ನು ನಾನು ಕಂಡಿಲ್ಲ ಎಂದು ಯಕ್ಷಗಾನ ಕಲಾರಂಗವನ್ನು ಹೊಗಳಿದರು.
ಕುಂದಾಪುರದ ಉದ್ಯಮಿ ಸೀತಾರಾಮ ನಕ್ಕತ್ತಾಯ, ಸುಂದರರಾಯರ ಬಂಧುಗಳಾದ ಸುಶೀಲ ಮುಗೆರಾಯ, ಎಚ್.ವಿ.ರಮಾದೇವಿ, ಗೀತಾ ಆರ್. ಆಚಾರ್ಯ ಹಾಗೂ ಪಂಚಾಯತ್ ಅಧ್ಯಕ್ಷೆ ಜಯಂತಿ ಮೇಡಮ್ ಉಪಸ್ಥಿತರಿದ್ದರು.
ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ, ಸ್ನೇಹಾ ವಿ. ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಹಿರಿಯಣ್ಣ ಕಿದಿಯೂರ್, ಸುಜಯೇಂದ್ರ ಹಂದೆ, ಜಯರಾಮ ಪಡಿಯಾರ್, ವಿದ್ಯಾಪೋಷಕ್‌ನ ಫಲಾನುಭವಿಗಳಾದ ಡಾ. ದೀಪಿಕಾ ಶಾನುಭಾಗ್, ನಿಶಾ, ಶ್ರಾವ್ಯ, ನಿಸರ್ಗ ಭಾಗವಹಿಸಿದ್ದರು.
ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.