ಸ್ಮಾರ್ಟ್ ಇ-ಚಲನ್, ಆಂಬುಲೆನ್ಸ್ ಸೇವಾ ವ್ಯವಸ್ಥೆ
ಉಡುಪಿ, ಜೂ.15: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ನವೀನ ಐಒಟಿ ಆಧಾರಿತ ಸ್ಮಾರ್ಟ್ ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಆಭಿವೃದ್ಧಿ ಪಡಿಸಿದ್ದಾರೆ.
ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಮೃತಾ ಸುವರ್ಣ, ನಿರೀಕ್ಷಾ ನರೇಶ್, ಶೀತಲ್ ಕರಣ್ ಮತ್ತು ಪೂಜಿತಾ ವಿಭಾಗದ ಪ್ರಾಧ್ಯಾಪಕ ಡಾ. ವಿಘ್ನೇಶ್ ಶೆಣೈ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ಈ ಯೋಜನೆಯ ಮುಖ್ಯ ಉದ್ದೇಶ ಸಂಚಾರಿ ದಟ್ಟಣೆಯಿಂದ ಉಂಟಾಗುವ ಆಂಬುಲೆನ್ಸ್ ವಿಳಂಬವನ್ನು ಕಡಿಮೆ ಮಾಡುವುದು, ಆಂಬುಲೆನ್ಸ್ ಸಂಚಾರವನ್ನು ನೈಜ ಸಮಯದಲ್ಲಿ ಪತ್ತೆ ಹಚ್ಚಿ ಸಮೀಪದ ವಾಹನಗಳಿಗೆ ಎಚ್ಚರಿಕೆ ಬಜರ್‌ಗಳ ಮೂಲಕ ಮಾಹಿತಿಯನ್ನು ನೀಡುತ್ತದೆ ಹಾಗೂ ಆಂಬುಲೆನ್ಸ್‌ಗೆ ದಾರಿ ಬಿಡದ ವಾಹನಗಳನ್ನು ಗುರುತಿಸಿ, ಅವುಗಳ ಕ್ಯೂ ಆರ್ ಕೋಡ್ ಅಥವಾ ವಾಹನದ ನೋಂದಣಿ ಸಂಖ್ಯೆಯನ್ನು ಸ್ಕ್ಯಾನ್ ಮಾಡುವ ಮೂಲಕ ಮೇಲ್ವಿಚಾರಣೆ ಮಾಡುತ್ತದೆ.
ಈ ವಾಹನಗಳಿಗೆ ಸ್ವಯಂಚಾಲಿತವಾಗಿ ಇ-ಚಲನ್ ಅಧಿಸೂಚನೆಗಳನ್ನು ಕಳುಸಲಾಗುತ್ತದೆ. ಇದಲ್ಲದೆ, ಲಭ್ಯ ಇರುವ ಸಮೀಪದ ಆಸ್ಪತ್ರೆಯನ್ನು ಗುರುತಿಸುವ ಮೂಲಕ ಆಂಬುಲೆನ್ಸ್ ಸೇವೆಗೆ ಸಹಾಯ ಮಾಡುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ವೇಗವಾದ ಪ್ರತಿಕ್ರಿಯೆ ಸಾಧ್ಯ ವಾಗುವುದರೊಂದಿಗೆ ರೋಗಿಗಳಿಗೆ ಉತ್ತಮ ಮತ್ತು ಸಮಯೋಚಿತ ಆರೋಗ್ಯ ಸೇವೆಯನ್ನು ಒದಗಿಸಲು ನೆರವಾಗುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.