ಉಡುಪಿ ಜಿಲ್ಲೆಯಲ್ಲಿ ಕಣ್ಣುಮುಚ್ಚಾಲೆ ಆಡುತ್ತಿರುವ ಮಳೆ; 10 ಮನೆಗಳಿಗೆ ಹಾನಿ
ಜೂನ್ 15ರವರೆಗೆ ಶೇ.36ರಷ್ಟು ಮಳೆ ಕೊರತೆ
ಉಡುಪಿ, ಜೂ.15: ಜಿಲ್ಲೆಯಲ್ಲಿ ಮುಂಗಾರು ಮಳೆ ಕಣ್ಣುಮುಚ್ಚಾಲೆಯಾ ಡುತ್ತಿದೆ. ಶನಿವಾರ ರಾತ್ರಿ ಹಾಗೂ ರವಿವಾರ ಬಿರುಸು ಪಡೆದ ಮಳೆ, ಸೋಮವಾರ ಸಂಪೂರ್ಣ ಕ್ಷೀಣಿಸಿದೆ. ಇಡೀ ದಿನ ಒಳ್ಳೆಯ ಬಿಸಿಲು ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ವಿಜ್ಞಾನಿಗಳು ಈ ಬಾರಿ ಭಾರತದಲ್ಲಿ ಎಲ್ ನಿನೋ ಪ್ರಭಾವದಿಂದ ಭಾರತದಲ್ಲಿ ಮುಂಗಾರು ಮಳೆಯಲ್ಲಿ ಕೊರತೆ ಕಂಡುಬರಲಿದೆ ಎಂದು ಭವಿಷ್ಯ ನುಡಿದಿರುವುದು ನಿಜವಾಗುತ್ತಿರುವ ಲಕ್ಷಣವಿದ್ದು, ಜೂನ್ 1ರಿಂದ 15ರವರೆಗೆ ಬರಬೇಕಾಗಿದ್ದ ಮಳೆಯಲ್ಲಿ ಈಗಾಗಲೇ ಶೇ.36ರಷ್ಟು ಕೊರತೆ ಕಂಡುಬಂದಿದೆ.
ಮುಂಗಾರು ಆರಂಭದ ಜೂನ್ 1ರಿಂದ 15ರವರೆಗೆ ಜಿಲ್ಲೆಯಲ್ಲಿ ಬೀಳಬೇಕಿದ್ದ ವಾಡಿಕೆ ಮಳೆ 432ಮೀ.ಮೀ. ಆಗಿದೆ. ಆದರೆ ಈ ವರ್ಷ ಇಂದಿನವರೆಗೆ (ಜೂ.15) ಬಿದ್ದಿರುವ ಮಳೆ 276ಮಿ.ಮೀ. ಮಾತ್ರ. ಅಂದರೆ ಈವರೆಗಿನ ವಾಡಿಕೆ ಮಳೆಯಲ್ಲಿ ಶೇ.36ರಷ್ಟು ಕೊರತೆ ಕಾಣಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಯಲ್ಲಿ 2025ರಲ್ಲಿ ಒಟ್ಟು 468ಮಿ.ಮೀ. ಮಳೆಯಾಗಿತ್ತು. ಅಂದರೆ ಕಳೆ ಬಾರಿ ವಾಡಿಕೆಯ ಮಳೆಗಿಂತ ಶೇ.8ರಷ್ಟು ಅಧಿಕ ಮಳೆ ಸುರಿದಿತ್ತು.
ನಿಗದಿತ ಸಮಯಕ್ಕೆ ಸರಿಯಾಗಿ ಜೂನ್ ಮೊದಲ ವಾರ ಜಿಲ್ಲೆಯನ್ನು ಪ್ರವೇಶಿಸಿದ ಮುಂಗಾರು ಮಳೆ, ನಂತರ ಮಾತ್ರ ಜನರು, ರೈತರೊಂದಿಗೆ ಕಣ್ಣುಮುಚ್ಚಾಲೆ ಆಟವಾಡುತ್ತಿದೆ. ನಿರಂತರವಾಗಿ ಧಾರಾಕಾರವಾಗಿ ಸುರಿಯ ಬೇಕಾಗಿದ್ದ ಮಳೆ, ದಿನದ ಕೆಲವೇ ಹೊತ್ತಿನಲ್ಲಿ ಸಾಮಾನ್ಯ ರೀತಿಯಲ್ಲಿ ಬರುತ್ತಿದೆ. ಹಿಂದೆಲ್ಲಾ ಜೂನ್ ಇಡೀ ತಿಂಗಳು ಆಕಾಶದಲ್ಲಿ ಸಾಮಾನ್ಯವಾಗಿ ಕಾಣಿಸದ ಸೂರ್ಯ ಈ ಬಾರಿ ಪ್ರತಿದಿನವೆಂಬಂತೆ ತನ್ನ ಸಂಪೂರ್ಣ ‘ಪ್ರಕಾಶಮಾನ’ದೊಂದಿಗೆ ಗೋಚರಿಸುತ್ತಿದೆ.
ಶನಿವಾರ ಹಾಗೂ ರವಿವಾರ ಅಬ್ಬರದ ಗಾಳಿಯೊಂದಿಗೆ ಸುರಿದ ಮಳೆಗೆ ಜಿಲ್ಲೆಯಲ್ಲಿ 10 ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಇವುಗಳಲ್ಲಿ ಹೆಚ್ಚಿನ ಮನೆಗಳು ಗಾಳಿಗೆ ಮರ ಬಿದ್ದು ಉಂಟಾದ ಹಾನಿಯಾಗಿದೆ. ಇದರಿಂದ ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾದ ಬಗ್ಗೆ ಪ್ರಾಥಮಿಕ ಅಂದಾಜು ತಿಳಿಸಿವೆ.
ಬಿರುಗಾಳಿಯಿಂದ ಬಸ್ರೂರು, ಕೋಣಿ ಹಾಗೂ ಮಣೂರು ಭಾಗದಲ್ಲಿ ಹೆಚ್ಚಿನ ಹಾನಿ ಕಂಡುಬಂದಿದೆ. ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಅಕ್ಕಯ್ಯ ಅವರ ನೆಗೆ 10,000, ಶಂಕರ ಎಂಬವರ ಮನೆಗೆ 25,000 ಹಾಗೂ ವೆಂಕಟೇಶ್ ಎಂಬವರ ಮನೆಗೆ 50,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಕೋಣಿ ಗ್ರಾಮದ ಸುಮನ ಇವರ ಮನೆ ಮೇಲೆ ಮರ ಬಿದ್ದು 30ಸಾವಿರ ರೂ., ಬಸ್ರೂರು ಗ್ರಾಮದ ರಾಘವೇಂದ್ರ ಎಂಬವರ ಮನೆಗೆ ಮೇಲೆ ಮರ ಬಿದ್ದು 80,000ರೂ., ಅಬ್ದುಲ್ ಸಮದ್‌ರ ಮನೆಗೆ 40,000ರೂ., ಸೀತು ಮನೆಗೆ 30,000ರೂ., ಜಯಲಕ್ಷ್ಮೀ ಅವರ ಮನೆಗೆ 80,000ರೂ, ಬಸ್ರೂರು ಮಂಡಿಕೇರಿಯ ಸುಂದರ ಖಾರ್ವಿಯವರ ಮನೆಗೆ 25,000ರೂ. ಹಾಗೂ ಸುರೇಂದ್ರ ಕಿಣಿ ಅವರ ಮನೆಗೆ 25,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದಿರುವುದು 24.7 ಮಿ.ಮೀ. ಮಳೆ ಮಾತ್ರ. ಜಿಲ್ಲೆಯಲ್ಲಿ ಬೈಂದೂರಿನಲ್ಲಿ ಮಾತ್ರ ಭಾರೀ ಮಳೆ ಬಿದ್ದಿದೆ. ಅಲ್ಲಿ ಬಿದ್ದಿರುವ ಮಳೆ 81.5 ಮಿ.ಮೀ. ಉಳಿದಂತೆ ಕುಂದಾಪುರದಲ್ಲಿ 22.1, ಕಾಪುವಿನಲ್ಲಿ 16.2, ಬ್ರಹ್ಮಾವರದಲ್ಲಿ 14.6, ಉಡುಪಿಯಲ್ಲಿ 14.4, ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗಬೇಕಿದ್ದ ಕಾರ್ಕಳದಲ್ಲಿ 7.2 ಮತ್ತು ಹೆಬ್ರಿಯಲ್ಲಿ 5.1ಮಿ.ಮೀ ಮಾತ್ರ ಮಳೆ ಬಿದ್ದಿದೆ.