ಜೂ.16ರಂದು ಡಾ.ಕಾರಂತರ ಕುರಿತು ವಿಚಾರಸಂಕಿರಣ, ನಾಟಕ ಪ್ರದರ್ಶನ
ಉಡುಪಿ, ಜೂ.15: ಮಂಗಳೂರು ವಿಶ್ವವಿದ್ಯಾಲಯ, ಮಂಗಳ ಗಂಗೋತ್ರಿ, ಡಾ.ಶಿವರಾಮ ಕಾರಂತ ಅಧ್ಯಯನ ಪೀಠ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತ ಬದುಕು-ಬರಹ ಸಂಶೋಧನೆಗಳ ಸಾಧ್ಯತೆಗಳು ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಮತ್ತು ‘ನಾನು ಕಾರಂತ’ ನಾಟಕ ಪ್ರದರ್ಶನ ಜೂ.16ರ ಮಂಗಳವಾರ ಬೆಳಗ್ಗೆ 10:30ರಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ವಿಚಾರ ಸಂಕಿರಣವನ್ನು ಹಾವೇರಿ ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಉದ್ಘಾಟಿ ಸಲಿದ್ದಾರೆ. ಮಂಗಳೂರಿನ ಡಾ.ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ನಾಗಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಆಶಯ ನುಡಿಗಳ ನ್ನಾಡಲಿದ್ದಾರೆ.
ಹಿರಿಯ ಸಂಶೋಧಕಿ ಮತ್ತು ಲೇಖಕಿ ಡಾ.ರೇಖಾ ಬನ್ನಾಡಿ ಉಪನ್ಯಾಸ ನೀಡಲಿದ್ದು, ಖ್ಯಾತ ಕವಯತ್ರಿ ಡಾ.ಜ್ಯೋತಿ ಗುರುಪ್ರಸಾದ್, ಚಿಂತಕಿ ಡಾ.ನಿಕೇತನ, ಸಂಶೋಧಕಿ ಶಾಲಿನಿ ಯು.ಬಿ, ಹಿರಿಯ ಲೇಖಕಿ ರಾಜಶ್ರೀ ಟಿ. ಪೆರ್ಲ ಪ್ರತಿಕ್ರಿಯೆ ನೀಡಲಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ.ನಿತ್ಯಾನಂದ ವಿ. ಗಾಂವಕರ್, ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲ, ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ.ಧನಂಜಯ ಕುಂಬ್ಲೆ, ಹಿರಿಯ ಪ್ರಾಧ್ಯಾಪಕ ಪ್ರೊ.ಸೋಮಣ್ಣ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ನಂತರ ಅಪರಾಹ್ನ 2:00ರಿಂದ ಮಂಗಳೂರು ವಿವಿಯ ಡಾ.ಶಿವರಾಮ ಕಾರಂತ ಅಧ್ಯಯನ ಪೀಠ ಪ್ರಸ್ತುತ ಪಡಿಸುವ ಜಗನ್ ಪವಾರ್ ನಿರ್ದೇಶನದ ರಾಜಶ್ರೀ ಪೆರ್ಲ ರಚನೆಯ ‘ನಾನು ಕಾರಂತ’ ನಾಟಕ ಪ್ರದರ್ಶನಗೊಳ್ಳಲಿದೆ. ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳು ಇದರಲ್ಲಿ ಅಭಿನಯಿಸಲಿದ್ದಾರೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.