ಪೆರ್ಡೂರಿನ ಸಂಜೀವಿನಿ ಒಕ್ಕೂಟಕ್ಕೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
ಹಿರಿಯಡ್ಕ, ಜೂ.14: ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶ್ರೀಶಕ್ತಿ ಸಂಘದ ಮುಖ್ಯ ಬರಹಗಾರರೊಬ್ಬರು ಸಂಘದ ಲಕ್ಷಾಂತರ ರೂ. ಹಣವನ್ನು ದುರುಪಯೋಗ ಪಡಿಸಿ ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದ ಮುಖ್ಯ ಬರಹಗಾರರಾದ ಸುಗಂಧಿ ಎಂಬವರು 2023ನೇ ಸಾಲಿನಿಂದ 2025 ಡಿಸೆಂಬರ್ ತಿಂಗಳ ನಡು ವಿನ ಅವಧಿಯಲ್ಲಿ ವಿವಿಧ ಶ್ರೀಶಕ್ತಿ ಸಂಘಗಳ ಸದಸ್ಯರಿಗೆ ನೀಡಿದ ಸಾಲ, ಸದಸ್ಯರು ಮರು ಪಾವತಿಸಲು ಮಾಡಿದ ಹಣವನ್ನು ಸಂಘದ ಜಮಾ ಪುಸ್ತಕದಲ್ಲಿ ಸಂಬಂಧಿಸಿದ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು. ಅಲ್ಲದೆ ಕೆಲ ಸದಸ್ಯರ ಬೇಡಿಕೆ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನಮೂದಿಸಿ ಅಧ್ಯಕ್ಷ್ಯರು ಕಾರ್ಯದರ್ಶಿ ಯವರ ನಕಲಿ ಸಹಿ ಮಾಡಿ ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕಿಗೆ ಸಲ್ಲಿಸಿ ಸಾಲ ಮಂಜೂರಿಸಿಕೊಂಡಿದ್ದಾರೆ.
ಬೇಡಿಕೆ ಇದ್ದಷ್ಟು ಹಣವನ್ನು ಸದಸ್ಯರಿಗೆ ನೀಡಿ ಉಳಿದ ಹಣವನ್ನು ತನ್ನ ಸ್ವಂತಕ್ಕೆ ಬಳಿಸಿಕೊಂಡಿದಲ್ಲದೆ ಕಾರ್ಯಕಾರಿ ಸಮಿತಿಗೆ ತೋರಿಸಲೆಂದು ಪ್ರತ್ಯೇಕ ಪುಸ್ತಕವನ್ನು ಹಾಗೂ ವ್ಯವಹಾರಕ್ಕೆ ಪ್ರತ್ಯೇಕ ಪುಸ್ತಕ ನಿರ್ವಹಿಸುತ್ತಾ ವಿವಿಧ ಸಂಘಗಳಲ್ಲಿ ಒಟ್ಟು 23,00,000ರೂ. ಹಣವನ್ನು ದುರುಪಯೋಗ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.