ಕನ್ನಡ ಶಾಲೆಗಳ ಮುಚ್ಚಿದರೆ ಸಂಸ್ಕೃತಿಗೆ ಧಕ್ಕೆ: ಕೇಮಾರು ಸ್ವಾಮೀಜಿ
ಉಡುಪಿ, ಜೂ.14: ಮಕ್ಕಳು ಸರ್ಟಿಫಿಕೇಟ್‌ನಲ್ಲಿ ಮಾತ್ರವಲ್ಲ, ಜೀವನ ದಲ್ಲೂ ಮೊದಲ ಸ್ಥಾನ ಪಡೆಯಲು ಪ್ರಯತ್ನಿ ಸಬೇಕು. ಕನ್ನಡ ಮಾಧ್ಯಮ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿದ್ದು, ಅವು ಸಂಪೂರ್ಣವಾಗಿ ಮುಚ್ಚಿದರೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಕ್ಕೂ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜದ ಎಲ್ಲರೂ ಮುಂದಾಗಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಅವರ ಜನ್ಮದಿನದ ಅಂಗವಾಗಿ ಪ್ರಸಾದ್‌ರಾಜ್ ಕಾಂಚನ್ ಅಭಿ ಮಾನಿ ಬಳಗ ಹಾಗೂ ಸರಳ ಬಾಬುರಾಯ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬ್ರಹ್ಮಾವರದ ಬಂಟರ ಭವನ ದಲ್ಲಿ ರವಿವಾರ ಆಯೋಜಿಸಲಾದ ರಕ್ತದಾನ ಶಿಬಿರ, ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿ ಗಳ ಸನ್ಮಾನ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗುರುಕುಲ ಪದ್ಧತಿಯ ಬಳಿಕ ಕನ್ನಡ ಮಾಧ್ಯಮ ಶಾಲೆಗಳೇ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿವೆ. ರಕ್ತ ರಸ್ತೆಯಲ್ಲಿ ಹರಿಯುವುದಕ್ಕಿಂತ ಮತ್ತೊಬ್ಬರ ಜೀವ ಉಳಿಸಲು ಬಳಸಬೇಕು ಎಂಬ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಗೆ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವತ್ತ ರಾಜಕಾರಣಿಗಳು ಗಮನಹರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ದೇಶದ ಅಭಿವೃದ್ಧಿಗೆ ಶ್ರೀಮಂತರಿಗಿಂತ ಯುವಜನರ ಪಾತ್ರ ಮಹತ್ವದ್ದಾಗಿದೆ. 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಬಹುಪಾಲು ಯುವಕರಿದ್ದು, ಅವರಿಗೆ ನ್ಯಾಯ ಮತ್ತು ಅವಕಾಶ ದೊರೆಯಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಾಜಕೀಯಕ್ಕೆ ಬರಬೇಕು. ಆಗ ಮಾತ್ರ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ಸಾಧ್ಯ ಎಂದು ಹೇಳಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಪೂಜಾರಿ ಹೇರೂರು, ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಅಶೋಕ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಕಾಂಗ್ರೆಸ್ ಮುಖಂಡರಾದ ಜನಾರ್ದನ ತೋನ್ಸೆ, ರಮೇಶ್ ಶೆಟ್ಟಿ, ಸುಧಾಕರ ಶೆಟ್ಟಿ ಮೈರ್ಮಾಡಿ, ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಜ್ಯೋತಿ ಹೆಬ್ಬಾರ್, ಕೃಷ್ಣಮೂರ್ತಿ ಆಚಾರ್ಯ, ಕುಶಲ್ ಬಿ.ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಗೋಪಿಕೃಷ್ಣ ನಾಯ್ಕ್, ಮಮತಾ ಶೆಟ್ಟಿ, ಕೆ.ಪಿ.ಇಬ್ರಾಹಿಂ, ಗ್ಯಾರೇಜ್ ಯೂನಿಯನ್ ಅಧ್ಯಕ್ಷ ನಾರಾಯಣ ಪೂಜಾರಿ, ಸವಿತಾ ಸಮಾಜದ ಶಿವರಾಮ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡ ಭುಜಂಗ ಶೆಟ್ಟಿ ಬ್ರಹ್ಮಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ವಕ್ತಾರೆ ವೆರೋನಿಕಾ ಕರ್ನೇಲಿಯೋ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.