ಶಿಥಿಲಗೊಂಡ ಸರಕಾರಿ ಶಾಲೆಗಳ ದುರಸ್ತಿಗೆ ಪ್ರಸ್ತಾವನೆ: ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯ
ಉಡುಪಿ, ಜೂ.15: ಶಿಥಿಲಗೊಂಡಿರುವ ಸರಕಾರಿ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳ ದುರಸ್ತಿಗೆ ಅಗತ್ಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸು ವಂತೆ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಇಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ 5 ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಳೆಗಾಲದಲ್ಲಿ ಅನಾಹುತ ಗಳನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಿಥಿಲಗೊಂಡ ಶಾಲೆಗಳ ಪಟ್ಟಿ ತಯಾರಿಸಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, 42 ಕೊಠಡಿಗಳಲ್ಲಿ ಹೆಚ್ಚಿನ ದುರಸ್ತಿ ಕಾರ್ಯ ಅಗತ್ಯವಿದೆ. 60 ಕೊಠಡಿಗಳಲ್ಲಿ ಸಣ್ಣಪುಟ್ಟ ದುರಸ್ತಿ ಸಾಕಾಗುತ್ತಿದೆ. ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ನೀಡುವಂತೆ ಇಂಜಿನಿಯರಿಂಗ್ ವಿಭಾಗಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದರು.
ಕಳೆದ ಮೂರು ತಿಂಗಳಿನಿಂದ ನೂರಾರು ಮಂದಿಗೆ ವೃದ್ಧಾಪ್ಯವೇತನ ಬಿಡುಗಡೆಯಾಗಿಲ್ಲ. ಸರ್ವೆಯರ್ ಮುಷ್ಕರ ದಿಂದ ಬಡವರು ಮನೆಕಟ್ಟಲು 9/11 ಪಡೆಯಲು ಪರದಾಡುವಂತಾಗಿದೆ. ಎಲ್ಲೂರು ಗೋಶಾಲೆ ಕಾಮಗಾರಿ ಪೂರ್ಣಗೊಂಡು 6 ತಿಂಗಳಾಗಿದ್ದು, ಆದಷ್ಟು ಬೇಗ ಕಾರ್ಯಾರಂಭ ಮಾಡಲು ಕ್ರಮವಹಿಸಬೇಕು ಎಂದು ಶಾಸಕ ಗುರ್ಮೆ ತಿಳಿಸಿದರು.
ಸಭೆಯಲ್ಲಿ ವೈದ್ಯಕೀಯ ಹಿತದೃಷ್ಟಿಯಿಂದ ಬಿಪಿಎಲ್ ಪಡಿತರ ಚೀಟಿಗಳನ್ನು ವಿಳಂಬ ಮಾಡದೆ ಶೀಘ್ರವೇ ಒದಗಿಸಿ ಕೊಡುವ ಬಗ್ಗೆ ತಿಳಿಸ ಲಾಯಿತು. ಮಳೆಗಾಲ ಆರಂಭವಾಗಿದ್ದು ರಸ್ತೆಯಲ್ಲಿನ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಹಾಗೂ ಚರಂಡಿಗಳಲ್ಲಿನ ಹುಲ್ಲು ಮತ್ತು ಹೂಳು ವಿಲೇವಾರಿಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು.
ಮುಂಗಾರು ಮಳೆ ಆರಂಭವಾಗಿದ್ದು ರೈತರ ಬೇಡಿಕೆಗೆಗೆ ಅನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸುವಂತೆ ಕೃಷಿ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಬೀಡಾಡಿ ದನಗಳನ್ನು ಹೂಳಲು ಗೋ ರುದ್ರಭೂಮಿ ಪ್ರಾರಂಭಿಸಲಾಗಿದೆ. ಇದೇ ರೀತಿ ನಗರ ಪ್ರದೇಶದಲ್ಲಿ ಪ್ರಾಣಿಗಳ ಕಳೆಬರ ಸುಡಲು ವಿದ್ಯುತ್ ಚಿತಾಗಾರಗಳನ್ನು ಅಳವಡಿಸುವುದು ಅತೀ ಅಗತ್ಯವಾಗಿದೆ ಎಂದು ಗುರ್ಮೆ ತಿಳಿಸಿದರು.
ದೇವಸ್ಥಾನಗಳ ಆದಾಯಕ್ಕೆ ಅನುಗುಣವಾಗಿ ಗ್ರೇಡ್ ನೀಡಲು ದತ್ತಿ ಇಲಾಖೆ ಹೊಸದಾಗಿ ಆದೇಶ ಮಾಡಿದೆ. ಈ ಬಗ್ಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕು. ಗ್ರೇಡ್ ವಿಳಂಬದಿಂದ ಪೂಜೆ, ಪ್ರಸಾದ ವಿತರಕರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಪೂಜಾ ಸಾಮಗ್ರಿ ಪೂರೈಕೆ ಮಾಡಿದವರ ಬಿಲ್ ಬಾಕಿ ಉಳಿದಿದೆ. ಇದರಿಂದ ದೇವಸ್ಥಾನಗಳಲ್ಲಿ ಅವ್ಯವಸ್ಥೆ ಉಂಟಾಗುವ ಸಾಧ್ಯತೆಗಳಿವೆ ಎಂದು ಯಶ್‌ಪಾಲ್ ಸುವರ್ಣ ತಿಳಿಸಿದರು.
ಸಭೆಯಲ್ಲಿ ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಉಡುಪಿ ತಾಲೂಕು ಕಾರ್ಯನಿರ್ವಹಣಾಧಿ ಕಾರಿ ವಿಜಯ, ಉಡುಪಿ ತಹಶೀಲ್ದಾರ್ ಗುರುರಾಜ್, ಉಡುಪಿ ನಗರ ಸಭೆಯ ಪೌರಾಯುಕ್ತ ಮಹಾಂತೇಶ್ ಹಾಗೂ ಉಡುಪಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.