ಉಡುಪಿ ನಗರದಲ್ಲಿ ಚಾಕು ಬೀಸಿ ಬಾಲಕಿಯ ರಂಪಾಟ!
ಸಾಂದರ್ಭಿಕ ಚಿತ್ರ
ಉಡುಪಿ, ಜೂ.16: ಮಾನಸಿಕ ಖಿನ್ನತೆಗೆ ಒಳಗಾಗಿದ್ದ 17 ವರ್ಷದ ಬಾಲಕಿಯನ್ನು ರಕ್ಷಿಸಲು ಮುಂದಾದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮೇಲೆ ಚಾಕು ಹಿಡಿದು ದಾಳಿ ನಡೆಸಿದ ಘಟನೆ ಸೋಮವಾರ ಉಡುಪಿಯ ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಾಲಕಿಯ ರಾದ್ಧಾಂತವನ್ನು ಕಂಡು ಬೆಚ್ಚಿ ಆಕೆಯ ತಾಯಿ ಮೂರ್ಚೆ ಬಿದ್ದಿದ್ದು, ಬಾಲಕಿಯ ತಂದೆಯ ಅಪೇಕ್ಷೆ ಮೇರೆಗೆ ಬಾಲಕಿ ಹಾಗೂ ಆಕೆಯ ತಾಯಿ ಇಬ್ಬರನ್ನೂ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶು ಶೆಟ್ಟಿ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ.
ಉತ್ತರ ಕನ್ನಡ ಮೂಲದ ಬಾಲಕಿ ಯಾವುದೋ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಹೆತ್ತವರ ಕಣ್ಣು ತಪ್ಪಿಸಿ ಸೋಮವಾರ ಬೆಳಗ್ಗೆ ಉಡುಪಿಗೆ ಬರುವ ಸರಕಾರಿ ಬಸ್ ಹತ್ತಿದ್ದಳು. ಸುದ್ದಿ ತಿಳಿದ ಹೆತ್ತವರು ಕಾರಿನ ಮೂಲಕ ಬಾಲಕಿಯಿದ್ದ ಬಸ್ಸನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ತಕ್ಷಣ ಬನ್ನಂಜೆಯ ಸರಕಾರಿ ಬಸ್ ನಿಲ್ದಾಣಕ್ಕೆ ಧಾವಿಸಿ ಬಾಲಕಿಯನ್ನು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸಹಾಯದಿಂದ ತಮ್ಮ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ಬಾಲಕಿ ಬ್ಯಾಗಿನಿಂದ ಚಾಕು ತೆಗೆದು ವಿಶು ಶೆಟ್ಟಿ ಮೇಲೆ ಮುಗಿಬಿದ್ದಿದ್ದಾರೆ. ಆಗ ಬಾಲಕಿಯ ಕೈಯಲ್ಲಿದ್ದ ಚಾಕುವನ್ನು ಸೆಳೆದುಕೊಳ್ಳುವಲ್ಲಿ ವಿಶು ಶೆಟ್ಟಿ ಸಫಲರಾಗಿದ್ದಾರೆ. ಬಾಲಕಿಯ ಆರ್ಭಟಕ್ಕೆ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೇ ಬಾಲಕಿ ಇಬ್ಬರು ಪ್ರಯಾಣಿಕರ ಮೇಲೆಯೂ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಮಹಿಳಾ ಠಾಣೆಯ ರಶ್ಮಿ ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸುನಂದಾ ಹಾಗೂ ನಾಗರತ್ನ ನೆರವಾದರು. ಯುವತಿಯ ಈ ಮನೋ ಸ್ಥಿತಿಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎಂದು ಶಂಕಿಸ ಲಾಗಿದೆ. ಬಾಲಕಿಗೆ ಇನ್ಸ್ಟಾಗ್ರಾಮ್ ಮೂಲಕ ಹೊರ ರಾಜ್ಯದ ಯುವಕನ ಪರಿಚಯವಾಗಿದ್ದು, ನಿರಂತರ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದಳು ಎಂಬ ಮಾಹಿತಿಯನ್ನು ಬಾಲಕಿಯ ತಂದೆ ತಿಳಿಸಿದ್ದಾರೆ.