ಎಲ್ಲ ಸನ್ನದು ಕಟ್ಟಡಗಳಲ್ಲಿ ಬೆಂಕಿ ನಂದಿಸುವ ಸಾಧನ ಕಡ್ಡಾಯ: ಅಬಕಾರಿ ಡಿಸಿ ಶ್ರೀನಿವಾಸ್
ಉಡುಪಿ, ಜೂ.23: ಮೈಸೂರು ಪಬ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಉಡುಪಿ ಅಬಕಾರಿ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲ ಸನ್ನದುದಾರರು ಹಾಗೂ ಬಾರ್ ಮಾಲಕರಿಗೆ ಅಗ್ನಿ ಅವಘಡ ಸಂಭವಿಸ ದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಯಾಗಾರವನ್ನು ಮಂಗಳವಾರ ಉಡುಪಿ ಅಬಕಾರಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಉಡುಪಿ ಅಬಕಾರಿ ಜಿಲ್ಲಾಧಿಕಾರಿ ಟಿ.ಎಂ. ಶ್ರೀನಿವಾಸ್ ಮಾತನಾಡಿ, ಎಲ್ಲ ಸನ್ನದು ಕಟ್ಟಡಗಳಲ್ಲಿ ಸನ್ನದುದಾರರು ಬೆಂಕಿ ನಂದಿಸುವ ಸಾಧನ ಹಾಗೂ ಬೆಂಕಿ ಅಲರಾಮ್‌ಗಳನ್ನು ಕಲ್ಪಿಸಬೇಕು. ಸನ್ನದು ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅಗ್ನಿ ಅವಘಡಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.
ಸನ್ನದುಗಳಲ್ಲಿ ವಿದ್ಯುತ್ ಸಂಪರ್ಕ ಸರಿಯಾಗಿ ನಿರ್ವಹಣೆ ಮಾಡುತ್ತಿರ ಬೇಕು. ತುರ್ತು ನಿರ್ಗಮನ ದ್ವಾರಗಳನ್ನು ಯಾವುದೇ ಅಡೆತಡೆಗಳು ಇಲ್ಲದಂತೆ ಇರಿಸಬೇಕು. ಸನ್ನದಿನಲ್ಲಿ ಮತ್ತು ಅಡುಗೆ ಮನೆಯಲ್ಲಿ ಸರಿಯಾಗಿ ಗಾಳಿ ಸಂಚಾರ ವ್ಯವಸ್ಥೆ ಕಲ್ಪಿಸಿರಬೇಕು. ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆಯನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಅವರು ಮಾಹಿತಿ ನೀಡಿದರು.
ಕೆಲವು ಬಾರ್‌ಗಳಲ್ಲಿ ಅನಧಿಕೃತವಾಗಿ ಮೂರು, ನಾಲ್ಕನೇ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿ, ಸರ್ವಿಸ್ ನೀಡುವ ಕಾರ್ಯ ಮಾಡಲಾಗುತ್ತದೆ. ಈ ರೀತಿಯ ಸ್ಥಳಗಳಲ್ಲಿ ಯಾವುದೇ ಅನಾಹುತ ನಡೆದರೆ ಸನ್ನದುದಾರರೇ ನೇರ ಜವಾಬ್ದಾರಾಗಿರುತ್ತಾರೆ. ಅವರು ಕಾನೂನು ಚೌಕಟ್ಟಿನಲ್ಲಿ ಅನುಮತಿ ಪಡೆದುಕೊಂಡು ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಉ.ಕಲ್ಗುಟಕರ್ ನೇತೃತ್ವದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ತೆಗೆದುಕೊಳ್ಳ ಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ಅಧೀಕ್ಷಕ ಅಶೋಕ್, ಅಬಕಾರಿ ಉಪಾಧೀಕ್ಷಕ ಗುರುಮೂರ್ತಿ ಪಾಲೆಕ್ಕಾರ್, ನಿರೀಕ್ಷಕ ರಾದ ಜ್ಯೋತಿ, ಪ್ರಕಾಶ್, ರಮೇಶ್, ರವಿನಾರಾಯಣ್, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
‘ಉಡುಪಿ ಜಿಲ್ಲೆಯಲ್ಲಿ ಒಟ್ಟು 480 ಸನ್ನದುದಾರಿದ್ದು, ಅವರಿಗೆ ಅಗ್ನಿ ಅವಘಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ. ಅದೇ ರೀತಿ ಸನ್ನದುದಾರರು ಇಲಾಖೆ ನಿಗದಿ ಪಡಿಸಿರುವ ಸಮಯಕ್ಕೆ ಸರಿಯಾಗಿ ತೆರೆದು, ರಾತ್ರಿ ಸಮಯಕ್ಕೆ ಸರಿಯಾಗಿ ಬಂದ್ ಮಾಡುವ ಬಗ್ಗೆ ತಿಳುವಳಿಕೆ ನೀಡಲಾಗಿದೆ’
-ಟಿ.ಎಂ.ಶ್ರೀನಿವಾಸ್, ಅಬಕಾರಿ ಜಿಲ್ಲಾಧಿಕಾರಿ, ಉಡುಪಿ
‘400-500 ಪ್ರಕರಣ ದಾಖಲಿಸಿ ದಂಡ ವಸೂಲಿ’
ನಿಗದಿತ ಬೆಳಗ್ಗೆ ನಿಗದಿತ ಅವಧಿಗೆ ಮೊದಲು ಹಾಗೂ ರಾತ್ರಿ ನಿಗದಿತ ಅವಧಿಯ ನಂತರವೂ ಕಾರ್ಯಾಚರಿಸುವ ಸನ್ನದುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 2025-26ನೇ ಸಾಲಿನಲ್ಲಿ 400-500 ಕೇಸು ಗಳನ್ನು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಮತ್ತೆ ಮತ್ತೆ ತಪ್ಪು ಮಾಡಿದರೆ ಅವರ ಪರವಾನಿಗೆಯನ್ನೇ ರದ್ದು ಮಾಡಲಾಗುತ್ತದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಟಿ.ಎಂ.ಶ್ರೀನಿವಾಸ್ ತಿಳಿಸಿದರು.
ಎಂಆರ್‌ಪಿ ದರ ಇತ್ತಿಚೆಗೆ ಕಡಿಮೆಯಾದರೂ ಕೆಲವು ಕಡೆ ಹಿಂದಿನ ದರವನ್ನೇ ಪಡೆಯಲಾಗುತ್ತಿರುವ ಬಗ್ಗೆ ದೂರು ಗಳು ಬಂದಿವೆ. ಆ ನಿಟ್ಟಿನಲ್ಲಿ ಅಬಕಾರಿ ಇಲಾಖೆಯಿಂದ ತಂಡ ರಚಿಸಿ ಕಾರ್ಯಾಚರಣೆ ಮಾಡ ಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಸರಕಾರ ನಿಗದಿ ಮಾಡಿದ ಎಂಆರ್‌ಪಿಯನ್ನು ಉಲ್ಲಂಘಿಸಿದವರ ವಿರುದ್ಧ 50 ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದರು.