×
Ad

ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಬಿ.ಕೆ.ಹರಿಪ್ರಸಾದ್‌ಗೆ ಮನವಿ

Update: 2026-06-23 22:12 IST

ಉಡುಪಿ, ಜೂ.23: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಮಂಗಳೂರಿನಲ್ಲಿ ಕಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕರಾವಳಿಯಲ್ಲಿ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಐವನ್ ಡಿಸೋಜ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಪರಿಷತ್ ಮುಖ್ಯ ಸಚೇತಕಾರಾಗಿ ಕ್ರೈಸ್ತ ಅಭಿವೃದ್ದಿ ನಿಗಮದಲ್ಲಿ ವಿವಿಧ ರೀತಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಗೆಲುವಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದ್ದು ರಾಜ್ಯದ 22 ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ.

ಸಮುದಾಯಕ್ಕೆ ಪ್ರತಿ ಬಾರಿ ಉನ್ನತ ಸ್ಥಾನಗಳನ್ನು ನೀಡುವಾಗ ಅವಕಾಶ ವಂಚಿರಾಗುತ್ತಿದ್ದು ಈ ಬಾರಿ ಡಿ.ಕೆ. ಶಿವಕುಮಾರ್ ಎಲ್ಲಾ ಸಮುದಾಯ ಗಳನ್ನು ಸಮಾನವಾಗಿ ಅವಕಾಶ ನೀಡುವ ಕೆಲಸವನ್ನು ಮಾಡಬೇಕು. ಈ ಮೂಲಕ ಐವನ್ ಡಿಸೋಜ ಅವರಿಗೆ ಸಚಿವ ಸ್ಥಾನವನ್ನು ಅಥವಾ ವಿಧಾನಪರಿಷತ್ ಸಭಾಪತಿಯಾಗಿ ನೇಮಕ ಮಾಡಬೇಕು. ಅವರಿಗೆ ಸಚಿವ ಸ್ಥಾನವನ್ನು ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಏಳಿಗೆಗೆ ಮತ್ತಷ್ಟು ಸಹಕಾರಿ ಯಾಗಲಿದೆ. ಈ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷರಾಗಿ ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸಂತೋಶ್ ಡಿಸೋಜ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊಸ ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹ ಶಿರ್ವ, ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News