ವಿದ್ಯುತ್ ಖಾಸಗೀಕರಣ ವಿರೋಧಿಸಿ ಸಿಐಟಿಯು ಮನವಿ
ಉಡುಪಿ, ಜೂ.23: ವಿದ್ಯುತ್ ಖಾಸಗೀಕರಣ ವಿರೋಧಿಸಿ ಹಾಗೂ ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಲೈಸನ್ಸ್ ನೀಡಬಾರದು ಎಂದು ಆಕ್ಷೇಪಣೆ ಪತ್ರವನ್ನು ಉಡುಪಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಮಂಗಳವಾರ ಸಲ್ಲಿಸಲಾಯಿತು.
ಸಿಐಟಿಯು ಉಡುಪಿ ವಲಯ ಸಮಿತಿ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ,ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ,ಉಡುಪಿ ಜಿಲ್ಲಾ ಜನರಲ್ ವರ್ಕ್ಸ್ ಯೂನಿಯನ್, ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್‌ನಿಂದ ಈ ಸಂಬಂಧ ಮನವಿಯನ್ನು ಸಲ್ಲಿಸಲಾಯಿತು.
ನೀಯೋಗದಲ್ಲಿ ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್, ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷ ಸುಭಾಷ್ ಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ, ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಸಂಜೀವ ಬಲ್ಕೂರು, ಸಂಘಗಳ ಮುಖಂಡರಾದ ಉಮೇಶ್ ಕುಂದರ್, ಸುನೀತಾ ಶೆಟ್ಟಿ, ನಳಿನಿ ಎಸ್., ಸರೋಜ ಎಸ್., ಸಾರಿಕಾ, ಶಾರದ, ಶರ್ಮಿಳ, ರಂಗನಾಥ, ಸೀತಾರಾಮ್ ನಾಯಕ್, ರತ್ನಾಕರ ಶೆಟ್ಟಿಗಾರ, ಜಯನಾಯಕ್ ಉಪಸ್ಥಿತರಿದ್ದರು.