×
Ad

ಮಾನಸಿಕ ಆರೋಗ್ಯ ವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆ ಪೂರಕ: ಡಾ.ಗಣನಾಥ ಎಕ್ಕಾರು

Update: 2026-06-23 22:14 IST

ಉಡುಪಿ, ಜೂ.23:ಮನುಷ್ಯನ ದೈಹಿಕ ಆರೋಗ್ಯಕ್ಕೆ ಮಾನಸಿಕ, ದೈಹಿಕ ಹಾಗೂ ಸಾಂಸ್ಕೃತಿಕ ಅಂಶಗಳು ಅತೀ ಅವಶ್ಯ. ಈ ಮೂರು ವಿಚಾರಗಳನ್ನು ಹೊಂದಿದಾಗ ವ್ಯಕ್ತಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿಯನ್ನು ಸಾಂಸ್ಕೃತಿಕ ಚಟುವಟಿಕೆಗಳು ಹೊಂದಿವೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.

ಮಲ್ಪೆ ಕಡಲ ಕಿನಾರೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಸಿಂಫನಿ ಸಂಗೀತ ಬಳಗ ಹಾಗೂ ಭ್ರಾಮರಿ ಜನಪದ ಕಲಾ ತಂಡ ಉಡುಪಿ ಇವರ ಸಹಯೋಗದಲ್ಲಿ ನಡೆದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಸುಗಮ ಸಂಗೀತ ಹಾಗೂ ಜನಪದ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿ ಪ್ರದೇಶ ಜನಪದ ಸಂಪತ್ತನ್ನು ಆಗಾಧವಾಗಿ ಹೊಂದಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಜಾನಪದ ಪ್ರಕಾರ ಗಳು ಅನೇಕ ಕಾರಣದಿಂದಾಗಿ ದೂರ ಉಳಿದಿದ್ದು, ಆ ನಿಟ್ಟಿನಲ್ಲಿ ಕಲಾ ನಡಿಗೆ ನಿಮ್ಮ ಬಳಿಗೆ ಕಾರ್ಯಕ್ರಮ ವನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಕಲಾ ಸಂಪತ್ತನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಸಿಂಫನಿ ಸಂಗೀತ ಬಳಗದಿಂದ ಸುಗಮ ಸಂಗೀತ ಹಾಗೂ ಜನಪದ ಗೀತ ಗಾಯನ, ಭ್ರಾಮರಿ ಜನಪದ ಕಲಾ ತಂಡದ ವತಿುಂದ ಕಂಗೀಲು ನೃತ್ಯ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಮಲ್ಪೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ್ ಸಿ ಬಂಗೇರ, ನಗರಸಭಾ ನಾಮ ನಿರ್ದೇಶಕ ಸದಸ್ಯ ಯಾದವ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಜನಪದ ಕಲಾವಿದ ಶಂಕರ್‌ದಾಸ್ ಚಡ್ಕಳ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News