ಉಡುಪಿ ಜಿಲ್ಲೆಗೆ ಭಾ.ಕಿ.ಸಂ. ರಾ. ಅಧ್ಯಕ್ಷ ಸಾಯಿ ರೆಡ್ಡಿ ಭೇಟಿ
ಉಡುಪಿ, ಜೂ.25: ಉಡುಪಿ ಜಿಲ್ಲೆಗೆ ಭಾರತೀಯ ಕಿಸಾನ್ ಸಂಘದ ಅಖಿಲ ಭಾರತ ಅಧ್ಯಕ್ಷರಾದ ಸಾಯಿ ರೆಡ್ಡಿ ಭೇಟಿ ನೀಡಿ ಸಂಘಟನೆಯ ಜಿಲ್ಲಾಸ್ತರದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಭಾರತೀಯ ಕಿಸಾನ್ ಸಂಘವು ಅಖಿಲ ಭಾರತ ಮಟ್ಟದ ರೈತ ಸಂಘಟನೆ ಯಾಗಿದ್ದು, ಪ್ರಸ್ತುತ ದೇಶಾದಾದ್ಯಂತ ಸುಮಾರು 82,000 ಗ್ರಾಮಗಳಲ್ಲಿ ಸಮಿತಿಗಳನ್ನು ಹೊಂದಿ, ರಾಷ್ಟ್ರ ಮಟ್ಟದ ಅತೀ ದೊಡ್ಡ ರೈತ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
‘ಸಂಘಟನೆಯ ಬೇರು ಗ್ರಾಮದಲ್ಲಿದೆ. ಗ್ರಾಮಗಳಲ್ಲಿ ರೈತರು ಸಂಘಟಿತ ರಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಸ್ವಾವಲಂಭಿಗಳಾಗಿ ಅರ್ಥಿಕ ಪ್ರಗತಿಯನ್ನು ಹೊಂದಿದಾಗ ಮಾತ್ರ ಈ ದೇಶ ಸಂಪದ್ಬರಿತವಾಗಲು ಸಾಧ್ಯ. ಅಂತಹ ಕಾರ್ಯವನ್ನ ಭಾರತೀಯ ಕಿಸಾನ್ ಸಂಘ ದೇಶದಾದ್ಯಂತ ಈವರೆಗೆ ಮಾಡುತ್ತಾ ಬಂದಿದೆ.’ ಎಂದು ಸಾಯಿ ರೆಡ್ಡಿ ತಿಳಿಸಿದರು.
2029ಕ್ಕೆ ಭಾರತೀಯ ಕಿಸಾನ್ ಸಂಘ ಪ್ರಾರಂಭವಾಗಿ 50 ವರ್ಷ ಪೂರ್ಣ ಗೊಳ್ಳಲಿದೆ. 2029ಕ್ಕೆ ಮೊದಲು ದೇಶದ ಎಲ್ಲಾ ಗ್ರಾಮಗಳಲ್ಲಿ ಸಂಘಟನೆಯನ್ನ ಹುಟ್ಟು ಹಾಕಿ, ರೈತರನ್ನ ಅರ್ಥಿಕ ಸ್ವಾವಲಂಭಿಯನ್ನಾಗಿ ಮಾಡುವು ದರ ಜೊತೆಗೆ ಈ ದೇಶದ ಬೆನ್ನೆಲುಬು ಆಗಿರುವ ಕೃಷಿಯನ್ನ ಮತ್ತೊಮ್ಮೆ ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ಹೊಣೆ ನಮ್ಮೆಲ್ಲ ಕಾರ್ಯಕರ್ತರ ಮೇಲಿದೆ. ಭಾರತೀಯ ಕಿಸಾನ್ ಸಂಘ ರೈತರ ಹಿತಾಸಕ್ತಿಗಾಗಿ ಅವರನ್ನು ಸಂಘಟಿಸಿ , ಅವರ ಸಮಸ್ಯೆಗಳನ್ನ ಪರಿಹರಿಸುವ ನಿಟ್ಟಿನಲ್ಲಿ ನೇರವಾಗಿ ಸರಕಾರಗಳೊಂದಿಗೆ ಸಮಾಲೋಚನೆ ನಡೆಸುತ್ತದೆ ಎಂದರು.
ಜಿಲ್ಲೆಯಲ್ಲಿ ಈ ಬಾರಿ ಮಳೆಯ ಪ್ರಮಾಣ ಪ್ರಾರಂಭದಲ್ಲೇ ಗಣನೀಯ ವಾಗಿ ಕಡಿಮೆ ಆಗಿದ್ದರ ಕಾರಣ ಕೃಷಿ ಚಟುವಟಿಕೆಗಳು ಇನ್ನೂ ಸಮರ್ಪಕವಾದ ವೇಗ ಪಡೆದಿಲ್ಲ. ಕಾಡುಪ್ರಾಣಿಗಳ ಸಮಸ್ಯೆ, ಭೂಮಿ ಫಲವತ್ತತೆ ಕಡಿಮೆ ಆಗಿ, ಕಾರ್ಮಿಕರ ಕೊರತೆ ಹಾಗೂ ಕಾರ್ಮಿಕರ ದುಬಾರಿ ವೇತನದ ಕಾರಣಕ್ಕೆ ಈ ಜಿಲ್ಲೆಯ ಕೃಷಿ ಬಹಳ ಹಿನ್ನಡೆಯನ್ನ ಕಂಡುಕೊಂಡಿದೆ ಎಂದರು.
ಈ ಎಲ್ಲಾ ಅಂಶಗಳಿಗೆ ಪರ್ಯಾಯ ಮಾರ್ಗೋಪಾಯಗಳನ್ನ ರೈತರು, ವಿಜ್ಞಾನಿಗಳು ಹಾಗೂ ಸರಕಾರಗಳ ಮೂಲಕ ಕಂಡುಕೊಳ್ಳಬೇಕಾದ ಅಗತ್ಯತೆ ಇದೆ. ಈ ಕಾರ್ಯ ಭಾರತೀಯ ಕಿಸಾನ್ ಸಂಘದಂತಹ ಸಂಘಟನೆ ಯಿಂದ ಮಾತ್ರ ಸಾಧ್ಯ. ಸಂಘಟನೆ ಸದೃಡವಾಗಿ ಬೆಳೆಯಬೇಕಾದರೆ ಕಾರ್ಯಕರ್ತರ ನಿರ್ಮಾಣ ಕೂಡ ಅತೀ ಅವಶ್ಯಕ. ಆ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರಿಗೆ ಮಾರ್ಗದರ್ಶನ, ತರಬೇತಿಯನ್ನು ಕೈಗೊಂಡಿದ್ದೇವೆ ಎಂದು ಸಾಯಿ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಭಾ.ಕಿ.ಸಂ. ದಕ್ಷಿಣ ಪ್ರಾಂತ ಅಧ್ಯಕ್ಷ ರಮೇಶ್‌ರಾಜು, ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಜೈನ್, ಉಪಾಧ್ಯಕ್ಷರಾದ ಶ್ರೀನಿವಾಸ ಭಟ್, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸ್ವಾಗತಿಸಿ, ಜಿಲ್ಲೆಯಲ್ಲಿ ಸಂಘಟನೆಯ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ವಂದಿಸಿದರು.
ಭಾಕಿಸಂ ರಾ.ಅಧ್ಯಕ್ಷ ಸಾಯಿ ರೆಡ್ಡಿ ಅವರು ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರಲ್ಲದೇ, ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಮಾರ್ಗದರ್ಶನ ನೀಡಿದರು. ಬಳಿಕ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದರು.