ಜಾಲಾಡಿ-ಹೊಸ್ಕಳಿ: ಜಲಾವೃತ ಗದ್ದೆಗಳಲ್ಲಿ ನಾಟಿಗೆ ಅಡ್ಡಿ: ಜಿಲ್ಲಾಧಿಕಾರಿ ಭೇಟಿ
ಕುಂದಾಪುರ, ಜೂ.24: ಜಾಲಾಡಿ-ಹೊಸ್ಕಳಿ ಭಾಗದ ಗದ್ದೆಗಳಲ್ಲಿ ನೀರು ನಿಂತು ನಾಟಿ ಕಾರ್ಯಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಾಲಾಡಿ-ಹೊಸ್ಕಳಿ ಭಾಗದ ಜಲಾವೃತವಾದ ಗದ್ದೆಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಈ ವೇಳೆ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಆಡಳಿತಾಧಿಕಾರಿ ಸೋಮಪ್ಪ, ಕಟ್‌ಬೆಲ್ತೂರು ಗ್ರಾಪಂ ಪಿಡಿಒ, ಉದ್ಯಮಿ ಕುಶಲ ಶೆಟ್ಟಿ, ರೈತ ಮುಖಂಡ ಶರತ್ ಕುಮಾರ್ ಶೆಟ್ಟಿ, ತ್ರಾಸಿ ಗ್ರಾಪಂ ಮಾಜಿ ಅಧ್ಯಕ್ಷ ಮಿಥುನ್ ದೇವಾಡಿಗ, ಗ್ರಾಪಂ ಮಾಜಿ ಸದಸ್ಯ ಸಚ್ಚಿಂದ್ರ ದೇವಾಡಿಗ, ರೈತರಾದ ಜಗನ್ನಾಥ ದೇವಾಡಿಗ, ತೇಜ ದೇವಾಡಿಗ, ದಿನಕರ ದೇವಾಡಿಗ, ರೈತರು ಉಪಸ್ಥಿತರಿದ್ದರು.
ಗದ್ದೆಯಲ್ಲಿ ನೀರು ನಿಲ್ಲುವುದರಿಂದ ಇಲ್ಲಿ ಕೃಷಿ ಮಾಡಲು ಅಸಾಧ್ಯ ವಾಗಿದೆ. ಈ ಬಾರಿ ಬೇಸಾಯ ಮಾಡಲು ಆಗುವುದಿಲ್ಲ. ಆದುದರಿಂದ ಮಳೆ ನೀರು ಹರಿದು ಹೋಗಲು ಮೋರಿ ನಿರ್ಮಿಸಬೇಕು ಮತ್ತು ರೈತರಿಗೆ ನಷ್ಟ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದರು.
ತುರ್ತು ಕಾಮಗಾರಿಗೆ ಸೂಚನೆ
ಜಾಲಾಡಿ-ಹೊಸ್ಕಳಿಯಲ್ಲಿ ಗದ್ದೆಗಳಲ್ಲಿ ನೀರು ನಿಂತಿರುವುದನ್ನು ಪರಿಶೀಲಿಸಲಾಗಿದ್ದು ನಿಂತ ನೀರು ಹರಿದು ಹೋಗಲು ಮೋರಿ ಅಳವಡಿಸಿ, ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಅದಕ್ಕೆ ಸ್ಥಳೀಯಾಡಳಿತ ಎಲ್ಲ ರೀತಿಯಿಂದಲೂ ಸಹಕಾರ ನೀಡಲಿದೆ. ರೈತರ ಬೇಸಾಯಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ಇನ್ನು ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಸಂಬಂಧ ಪ್ರಾಕೃತಿಕ ವಿಕೋಪದಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಸ್ವರೂಪ ಟಿ.ಕೆ., ಜಿಲ್ಲಾಧಿಕಾರಿ, ಉಡುಪಿ