×
Ad

ಹಾರಾಡಿ: ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ

Update: 2026-06-25 19:17 IST

ಉಡುಪಿ, ಜೂ.25: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರ್ಷಿತ್ ಈತನ ಬಡ ಕುಟುಂಬಕ್ಕೆ ಬ್ರಹ್ಮಾವರ ತಾಲೂಕಿನ ಹಾರಾಡಿಯ ಮೂಡು ಕುಕ್ಕುಡೆಯಲ್ಲಿ, ಮನೆಯ ಪ್ರಾಯೋಜಕ ರಾದ ಬಿ. ನರಹರಿ ಹಾಗೂ ಸಹೋದರರು ತಮ್ಮ ತಾಯಿಯ ಶತಾಬ್ದಿ ಸಂದರ್ಭದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಯಶೋದಾಕೃಷ್ಣ’ವನ್ನು ಮಂಗಳವಾರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಬೈಕಾಡಿಯ ಸುಂದರ ಪೂಜಾರಿ ಮತ್ತು ದೇವಕಿ ಇವರ ಪುತ್ರ ಹರ್ಷಿತ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಈತನ ಕುಟುಂಬಕ್ಕೆ ದಾನಿಗಳಾದ ಬಿ.ನರಹರಿ ಮತ್ತು ಸಹೋದರರು ತಮ್ಮ ತಂದೆ- ತಾಯಿ ಯರಾದ ಬೈಕಾಡಿ ಕೃಷ್ಣಯ್ಯ ಹಾಗೂ ಯಶೋದಾ ದೇವಿ ಇವರ ನೆನಪಿನಲ್ಲಿ ಈ ಮನೆಯನ್ನು ನಿರ್ಮಿಸಿಕೊಟ್ಟಿದ್ದರು.

ಮನೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಮಣಿಪಾಲ ಟೆಕ್ನಾಲಜೀಸ್ ಲಿ.ನ ಕಾರ್ಯ ನಿರ್ವಾಹಕ ಅಧ್ಯಕ್ಷ ಗೌತಮ್ ಪೈ ಮಾತನಾಡಿ, ಯಕ್ಷಗಾನ ಕಲಾರಂಗ ಮಾಡುತ್ತಿರುವ ಯಕ್ಷಗಾನ ಕಲೆ-ಕಲಾವಿದರ ಕ್ಷೇಮ ಚಿಂತನೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಮಾಜಪರ ಕಾಳಜಿಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಹರ್ಷಿತನಿಗೆ ಚೆನ್ನಾಗಿ ಕಲಿತು ಬೇರೆಯವರಿಗೆ ಉದ್ಯೋಗ ನೀಡುವಷ್ಟು ಎತ್ತರಕ್ಕೆ ಬೆಳೆಯಬೇಕೆಂದು ಶುಭ ಹಾರೈಸಿದರು.

ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಹರಿನಾರಾಯಣದಾಸ ಆಸ್ರಣ್ಣರು ಮಾತನಾಡಿ ಮನುಷ್ಯನಿಗೆ ಮನೆ ಕೇವಲ ಆಶ್ರಯ ತಾಣವಷ್ಟೇ ಅಲ್ಲ, ಅವನ ಎಲ್ಲಾ ಇಷ್ಟಾರ್ಥಗಳ ಈಡೇರಿಕೆಗೆ ಅದು ಅತ್ಯಂತ ಮುಖ್ಯ ಎಂಬುದನ್ನು ವಿವರಿಸಿ, ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಕಲಾರಂಗದ ಕೊಡುಗೆ ಅನನ್ಯ ಎಂದು ಹೇಳಿದರು.

ಮಣಿಪಾಲ ಟೆಕ್ನಾಲಜೀಸ್‌ನ ಸೀನಿಯರ್ ಜನರಲ್ ಮ್ಯಾನೇಜರ್ ಆಗಿರುವ ಮನೆಯ ಪ್ರಾಯೋಜಕ ಬಿ.ನರಹರಿ ಅವರು ಯಕ್ಷಗಾನ ಕಲಾರಂಗ ಬಡ ವಿದ್ಯಾರ್ಥಿಗೆ ತಮ್ಮ ಮಾತಾಪಿತರ ನೆನಪಿನಲ್ಲಿ ಮನೆ ನಿರ್ಮಿಸಿ ಕೊಡುವ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಧನ್ಯವಾದ ತಿಳಿಸಿದರು.

ಮಣಿಪಾಲ ಮೀಡಿಯ ಲಿ.ನ ನಿವೃತ್ತ ಅಧಿಕಾರಿ ನಾರಾಯಣ ಬಿ.ಕೆ., ಮಣಿಪಾಲ್ ಟೆಕ್ನಾಲಾಜಿಸ್‌ನ ಸಿಇಓ ಅಭಯ್ ಗುಪ್ತೆ, ಗ್ರೂಪ್ ಸಿಎಚ್‌ಆರ್‌ಒ ಪ್ರಮೋದ್ ಫೆರ್ನಾಂಡಿಸ್, ಜ್ಯೋತಿ ನರಹರಿ, ಲೋಲಾಕ್ಷಿ ರತ್ನಾಕರ, ಭಾರತಿ ನಾರಾಯಣ, ಉಪೇಂದ್ರ ಸೋಮಯಾಜಿ, ಮನೋಜ ಬೈಕಾಡಿ, ಡಾ. ಅನನ್ಯಾ ಬೈಕಾಡಿ, ಶ್ರೀಪತಿ ಆಚಾರ್ಯ, ಡಾ.ವಿರೂಪಾಕ್ಷ ದೇವರಮನೆ, ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆ ಕಾರ್ಯದರ್ಶಿ ವಿದ್ಯಾಪ್ರಸಾದ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಯು.ಅನಂತ ರಾಜ ಉಪಾಧ್ಯ, ಹಿರಿಯಣ್ಣ ಕಿದಿಯೂರ್, ಡಾ.ರಾಜೇಶ ನಾವುಡ, ಎಚ್.ಎನ್.ವೆಂಕಟೇಶ್, ನಟರಾಜ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಗಣೇಶ ಬ್ರಹ್ಮಾವರ, ಸುಜಯೀಂದ್ರ ಹಂದೆ, ಅಜಿತ್ ಕುರ್ಮಾ, ಪ್ರಭಾಕರಭಂಡಿ, ನಾಗರಾಜ ಹೆಗಡೆ,ಜಯರಾಮ ಪಡಿಯಾರ್, ರಘುರಾಮ್ ಬೈಕಾಡಿ ಭಾಗವಹಿಸಿದ್ದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News