ಕರಾವಳಿಯಲ್ಲಿ ಉತ್ತಮ ಮಳೆ; ಒಂದು ವಾರ ಆರೆಂಜ್ ಅಲರ್ಟ್ ಘೋಷಣೆ
ಉಡುಪಿ/ಕುಂದಾಪುರ, ಜೂ.29: ನಾಡಿನ ಹಲವು ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗುತ್ತಿರುವ ವರದಿಗಳ ನಡುವೆಯೇ ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ರವಿವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದೆ. ನಾಳೆಯಿಂದ ಮುಂದಿನ ಒಂದು ವಾರ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಬಾರಿ ಅಧಿಕೃತ ಮಳೆಗಾಲ ಪ್ರಾರಂಭಗೊಂಡ ಬಳಿಕ ಮೊದಲ ಬಾರಿ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳಲ್ಲೂ ಸರಿಸುಮಾರು ಒಂದೇ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಇದುವರೆಗೆ ಒಂದೆರಡು ತಾಲೂಕುಗಳಲ್ಲಿ ಮಳೆಯಾದರೆ ಉಳಿದ ತಾಲೂಕುಗಳಲ್ಲಿ ಮಳೆಯೇ ಬೀಳುತ್ತಿರಲಿಲ್ಲ. ಆದರೆ ಇಂದು ಬೆಳಗಿನಿಂದ ಜಿಲ್ಲೆಯಲ್ಲಿ ಸಹಜ ಮಳೆಗಾಲದ ವಾತಾವರಣ ಕಂಡು ಬರುತ್ತಿದೆ. ಮಳೆ ಇನ್ನೂ ಬಿರುಸು ಪಡೆಯದಿದ್ದರೂ, ಆಗಾಗ ಬಂದು ವಾತಾವರಣ ಸಂಪೂರ್ಣ ತಂಪಾಗಿದೆ.
ಕುಂದಾಪುರದಲ್ಲಿ ಮನೆಗೆ ಹಾನಿ: ಕುಂದಾಪುರ ಹಾಗೂ ಬೈಂದೂರಿನಾದ್ಯಂತ ರವಿವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೂ ಉತ್ತಮ ಮಳೆಯಾಗಿದೆ. ದಿನದಲ್ಲಿ ಆಗ್ಗಾಗ್ಗೆ ಗಾಳಿ ಸಹಿತ ಮಳೆಯಾಗುತ್ತಿತ್ತು. ಗಾಳಿಯಿಂದ ಕರ್ಕುಂಜೆ ಗ್ರಾಮದ ಕರ್ಕುಂಜೆಮನೆ ಎಂಬಲ್ಲಿ ಜಾನಕಿ ಶೆಡ್ತಿ ಅವರ ಮನೆ ಮೇಲೆ ಒಣಗಿದ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಅಂದಾಜು 40 ಸಾವಿರ ರೂ. ನಷ್ಟ ಸಂಭವಿಸಿದೆ.
ಕುಂದಾಪುರ, ಬೈಂದೂರು, ನಾಗೂರು, ಮರವಂತೆ, ಕೋಟೇಶ್ವರ, ತೆಕ್ಕಟ್ಟೆ, ಸಿದ್ದಾಪುರ, ಹಾಲಾಡಿ, ಗೋಳಿಯಂಗಡಿ, ಹೊಸಂಗಡಿ, ಅಮಾಸೆಬೈಲು, ಬಸ್ರೂರು, ಶಂಕರನಾರಾಯಣ, ಕೊಲ್ಲೂರು, ವಂಡ್ಸೆ, ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು ಸಹಿತ ವಿವಿಧೆಡೆಗಳಲ್ಲಿ ಉತ್ತಮ ಮಳೆಯಾದ ವರದಿಗಳು ಬಂದಿವೆ.
ಜಿಲ್ಲೆಯಲ್ಲಿ 32.3ಮಿ.ಮೀ.ಮಳೆ: ಇಂದು ಮುಂಜಾನೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 32.3 ಮಿ.ಮೀ. ಮಳೆಯಾದ ವರದಿ ಬಂದಿದೆ.ಹೆಬ್ರಿಯಲ್ಲಿ ಅತ್ಯಧಿಕ 39.8 ಮಿ.ಮೀ. ಮಳೆಯಾದರೆ, ಕಾಪುವಿನಲ್ಲಿ 38.1, ಬೈಂದೂರಿನಲ್ಲಿ 34.7, ಬ್ರಹ್ಮಾವರದಲ್ಲಿ 33.3, ಕಾರ್ಕಳದಲ್ಲಿ 33.0, ಕುಂದಾಪುರದಲ್ಲಿ 26.8 ಹಾಗೂ ಉಡುಪಿಯಲ್ಲಿ 26.2ಮಿ.ಮೀ. ಮಳೆಯಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರ ಅಂದರೆ ಜೂನ್ 30ರಿಂದ ಜುಲೈ 6ರವರೆಗೆ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ. ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಮಳೆ, ಗಾಳಿ, ಸಿಡಿಲು ಬರುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯಬೇಕು. ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಹೊರಗಿನ ಕೃಷಿ ಚಟುವಟಿಕೆಯಿಂದ ದೂರವಿರಬೇಕು ಮತ್ತು ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯಬಾರದು.
ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ಮರ, ವಿದ್ಯುತ್ ಕಂಬದ ಹತ್ತಿರ ನಿಲ್ಲಬಾರದು. ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು. ದುರ್ಬಲವಾದ / ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ /ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಅಪಾಯಕಾರಿ ಗೆಲ್ಲು/ರೆಂಬೆ-ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ ವಾಸಿಸುವ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು.
ಹೆಚ್ಚು ಮಳೆಯಾಗುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಭೂಕುಸಿತ ವಾಗುವ ಸಂಭವವಿರುತ್ತದೆ. ಹಾಗಾಗಿ ಇಂತಹ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ತಹಶೀಲ್ದಾರರ ಕಛೇರಿ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ಸಂಪರ್ಕಿಸಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಸಾಕಷ್ಟು ಮುಂಚಿತವಾಗಿಯೇ ಆಶ್ರಯ ಪಡೆಯಬಹುದು.
ಮುಂದಿನ 7 ದಿನಗಳ ಕಾಲ ಹೆಚ್ಚು ಗಾಳಿಯೊಂದಿಗೆ ಮಳೆ ಬರುವುದರಿಂದ ದುರ್ಬಲ ಕಟ್ಟಡದಲ್ಲಿ ವಾಸವಿದ್ದವರು ಅಗತ್ಯವಿದ್ದಲ್ಲಿ ಮುಂಜಾಗೃತ ಕ್ರಮವಾಗಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಉಳಿಯಬಹುದು.
ಹೆಚ್ಚಿನ ಮಾಹಿತಿಗಳಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ತುರ್ತು ಸೇವೆಗೆ ಶುಲ್ಕ ರಹಿತ:1077 ಅಥವಾ ದೂ.ಸಂಖ್ಯೆ: 0820-2574802 ಅಥವಾ ಆಯಾ ತಾಲೂಕು ತಹಶೀಲ್ದಾರರ ಕಛೇರಿ ಗಳಾದ ಉಡುಪಿ ದೂ.ಸಂಖ್ಯೆ: 0820-2520417, ಕುಂದಾಪುರ ದೂ.ಸಂಖ್ಯೆ: 08254-230357, ಕಾರ್ಕಳ ದೂ.ಸಂಖ್ಯೆ: 08258- 230201, ಕಾಪು ದೂ.ಸಂಖ್ಯೆ: 0820-2551444, ಬ್ರಹ್ಮಾವರ ದೂ.ಸಂಖ್ಯೆ: 0820-2560494, ಬೈಂದೂರು ದೂ.ಸಂಖ್ಯೆ: 08254-251657 ಹಾಗೂ ಹೆಬ್ರಿ ದೂ.ಸಂಖ್ಯೆ: 08253-250201 ಮತ್ತು ಉಡುಪಿ ನಗರಸಭೆ ಸಹಾಯವಾಣಿ ಸಂಖ್ಯೆ: 0820-2520306ಗೆ ಕರೆ ಮಾಡಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.