×
Ad

ದಾಖಲೀಕರಣದಿಂದ ಯಕ್ಷಗಾನದ ಮೂಲ ಸ್ವರೂಪ ಉಳಿಸಲು ಸಾಧ್ಯ: ಡಾ.ಸಭಾಹಿತ್

ವೀರ ವೃಷಸೇನ ಯಕ್ಷಗಾನ ದಾಖಲೀಕರಣ

Update: 2026-07-05 19:02 IST

ಉಡುಪಿ, ಜು.5: ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರ(ಮಾಹೆ), ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಾಹೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವೀರ ವೃಷಸೇನ ಯಕ್ಷಗಾನ ದಾಖಲೀಕರಣ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಲಹೆಗಾರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್ ಮಾತನಾಡಿ, ಯಕ್ಷಗಾನ ಕಾಲಕಾಲಕ್ಕೆ ಬದಲಾವಣೆಯನ್ನು ಕಾಣುತ್ತ ಬಂದಿದೆ. ಹಿಂದಿನ ಕಲಾವಿದರ ಪರಂಪರೆಯ ವೇಷಗಳು ಇಂದು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ದಾಖಲೀಕರಣ ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ ಎಂದರು.

ಮುಂದಿನ ಕಲಾವಿದರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಹಾಗೂ ಅದನ್ನು ರಂಗದಲ್ಲಿ ಅಳವಡಿಸಿಕೊಂಡು ಯಕ್ಷಗಾನ ಕಲೆಯ ಮೂಲ ಸತ್ವ ಸ್ವರೂಪವನ್ನು ಇಂದಿನವರಿಗೂ ತಲುಪಿಸುವ ಕೆಲಸವನ್ನು ಮಾಡುವ ಉದ್ದೇಶದಿಂದ ಈ ದಾಖಲೀಕರಣ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಹಿಂದಿನ ಕಲಾವಿದರು ಸನ್ನಿವೇಶವನ್ನು ರಂಗದಮೇಲೆ ಕಟ್ಟುತ್ತಿದ್ದ ರೀತಿ ಅನನ್ಯವಾದುದು. ಹಳೆಯದು ಯಾವಾಗಲೂ ಅಮೂಲಯವಾದದ್ದು, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಯಕ್ಷಗಾನ ಕೇಂದ್ರ ಇಂತಹ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತ ನಾಡಿ, ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿ ಅತ್ಯಂತ ಮಹತ್ವವಾದದ್ದು, ಅದರಲ್ಲೂ ಶುದ್ಧ ಕನ್ನಡ ಬಳಕೆಯ ಯಕ್ಷಗಾನ ಕಲೆಯಿಂದಲೂ ಕನ್ನಡ ಭಾಷೆ ಉಳಿಯಲು ಸಾಧ್ಯ. ಇಂತಹ ದಾಖಲೀಕರಣದ ಮೂಲಕ ಹೊಸತಲೆಮಾರಿಗೆ ಪರಂಪರೆಯ ಯಕ್ಷಗಾನ ವನ್ನು ತಲುಪಿಸುವ ಕೆಲಸವನ್ನು ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ವಹಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ವೈದ್ಯ ಡಾ.ಜಗದೀಶ್ ಶೆಟ್ಟಿ ಸಿದ್ಧಾಪುರ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಮೀನಲಕ್ಷಿಣಿ ಅಡ್ಯಂತಾಯ, ವಿ.ಜಿ.ಶೆಟ್ಟಿ, ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯ, ಕಾರ್ಯಕ್ರಮದ ಸಂಯೋಜಕ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಉಮೇಶ್ ಸುವರ್ಣ ಪ್ರಾರ್ಥಿಸಿದರು. ಎಂಜಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News