ಹೂಡಿಕೆ ಹೆಸರಿನಲ್ಲಿ 30.90 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಮಲ್ಪೆ, ಜು.4: ಹೂಡಿಕೆ ಹೆಸರಿನಲ್ಲಿ ಹಲವು ಮಂದಿಗೆ 30.90ಲಕ್ಷ ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ ಆಚಾರ್ಯ, ಜ್ಯೋತಿ ಜತ್ತನ್, ದಮಯಂತಿ ಎ., ರೋಹಿಣಿ ಎಂಬವರು ಜೂ.19ರಂದು ಕೋಡಿ ಗ್ರಾಮದ ಇಂದಿರಾ ಬಂಗೇರ ಎಂಬವರ ಮನೆಗೆ ಬಂದು ಬಿಜಿ ವೆಲ್ತ್ ಶೇರಿಂಗ್ ಎಂಬ ಶೇರ್ ಮಾರ್ಕೆಟಿಂಗ್ ವ್ಯಾವಹಾರವನ್ನು ಮಲ್ಪೆಯ ಕಾರ್ತಿಕ್ ಸಹಜ್ ಕಟ್ಟಡದಲ್ಲಿ ಕಛೇರಿ ಇದ್ದು, ನಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣ ವಾಗುತ್ತದೆ ಎಂದು ನಂಬಿಸಿದ್ದರು.
ನಂತರ ಆರೋಪಿಗಳು ಇದೊಂದು ವಿದೇಶಿ ಕಂಪನಿಯಾಗಿದ್ದು ಒಮ್ಮೆ ಮಾತ್ರ ಹಣ ಹೂಡಿಕೆ ಮಾಡಿದಲ್ಲಿ ಡಾಲರ್ ರೂಪದಲ್ಲಿ ಐಡಿ ಓಪನ್ ಆಗಿ ಅದರಲ್ಲಿ ಹೂಡಿಕೆಯಾಗುತ್ತದೆ ಎಂದು ತಿಳಿಸಿದ್ದರು. ಅದರಂತೆ ಇಂದಿರಾ ಅವರ ಕುಟುಂಬದವರಿಗೆ ಹಾಗೂ ಇತರರಿಗೆ ಸೇರಿ ಒಟ್ಟು 30,90,000ರೂ. ಹಣವನ್ನು ಆರೋಪಿಗಳು ಪಡೆದಿದ್ದರು. ನಂತರದಲ್ಲಿ ಹೂಡಿಕೆ ಮಾಡಿದ ಹಣವನ್ನು ವಾಪಸ್ಸು ನೀಡದೆ, ಕಛೇರಿಯನ್ನು ಬಂದ್ ಮಾಡಿ ಹೋಗಿ ಇಂದಿರಾ ಬಂಗೇರ ಹಾಗೂ ಇತರರಿಗೆ ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ.