ಉಡುಪಿ ಜಿಲ್ಲೆಯಾದ್ಯಂತ ಗಾಳಿಮಳೆ: 15 ಮನೆಗಳಿಗೆ ಹಾನಿ, ಅಪಾರ ನಷ್ಟ
ಉಡುಪಿ, ಜು.5: ಜಿಲ್ಲೆಯ ಕೆಲವು ಭಾಗಗಳಲ್ಲಿ ಕಳೆದ ರಾತ್ರಿಯಿಂದ ಸುರಿದ ಭಾರೀ ಗಾಳಿ ಮಳೆಗೆ 15 ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 42.4 ಮಿ.ಮೀ. ಮಳೆಯಾಗಿದ್ದು, ಕಾರ್ಕಳ- 14.6ಮಿ.ಮೀ., ಕುಂದಾಪುರ- 56.5ಮಿ.ಮೀ., ಉಡುಪಿ-31.0ಮಿ.ಮೀ., ಬೈಂದೂರು-51.5ಮಿ.ಮೀ., ಬ್ರಹ್ಮಾವರ- 44.8ಮಿ.ಮೀ., ಕಾಪು-4.7ಮಿ.ಮೀ., ಹೆಬ್ರಿ-71.7ಮಿ.ಮೀ. ಮಳೆಯಾಗಿದೆ.
ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ತಿಮ್ಮಪ್ಪ ಲಿಂಗಯ್ಯನ ಎಂಬವರ ವಾಸ್ತವ್ಯದ ಮನೆಯ ಸಿಮೆಂಟ್ ಶೀಟ್ ಛಾವಣಿ ಗಾಳಿಮಳೆಗೆ ಭಾಗಶಃ ಹಾನಿಯಾಗಿ ಸುಮಾರು 20,000ರೂ. ಮತ್ತು ಪಡುವರಿ ಗ್ರಾಮದ ಸೀತಾ ಖಾರ್ವಿ ಅಳಿವೆಕೋಡಿ ಅವರ ಮನೆಯ ಹೆಂಚು ಗಾಳಿಯಿಂದ ಹಾರಿ ಹೋಗಿ ಸುಮಾರು 10,000ರೂ. ನಷ್ಟ ಉಂಟಾಗಿದೆ.
ಕಾಪು ತಾಲೂಕಿನ ಪಾಂಗಾಳದ ಮಾಧವ ಪೂಜಾರಿ ಎಂಬವರ ಮತ್ತು ಇನ್ನಂಜೆ ವಿಷ್ಣುಮೂರ್ತಿ ಎಂಬವರ ವಾಸ್ತವ್ಯದ ಮನೆಗಳು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದ್ದು, ಇದರಿಂದ ಕ್ರಮವಾಗಿ 10,000 ರೂ. ಮತ್ತು 30,000ರೂ. ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಕೋಡಿಯ ಇಬ್ರಾಹಿಂ ಎಂಬವರ ವಾಸ್ತವ್ಯದ ಮನೆಗೆ ಗಾಳಿ ಮಳೆಯಿಂದ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿ 20,000ರೂ., ಹೆಮ್ಮಾಡಿ ಗ್ರಾಮದ ಚಿಕ್ಕು ಎಂಬವರ ಮನೆಯ ಮೇಲೆ ಆಲದ ಮರದ ಕೊಂಬೆ ಮುರಿದು ಬಿದ್ದು ಭಾಗಶಃ ಹಾನಿಯಾಗಿ ಸುಮಾರು 80,000ರೂ., ಕರ್ಕುಂಜೆ ಗ್ರಾಮದ ಮಾವಿನಕಟ್ಟೆಯ ಹಾಜಿರಾ ಎಂಬವರ ಮನೆಯ ಮೇಲೆ ಮರ ಬಿದ್ದು 50ಸಾವಿರ ರೂ. ಮತ್ತು ಕುಂಟನೆರಳು ಎಂಬಲ್ಲಿ ಮುತ್ತು ಎಂಬವರ ಮನೆಯ ಮರ ಬಿದ್ದು 20ಸಾವಿರ ರೂ. ನಷ್ಟ ಉಂಟಾಗಿದೆ.
ಹಾರ್ದಳ್ಳಿ ಮಂಡಳ್ಳಿಯ ಗಣಪು ಮೊಗವೀರ ಎಂಬವರ ಮನೆಯ ಮೇಲೆ ಮರ ಬಿದ್ದು 30ಸಾವಿರ ರೂ. ನಷ್ಟ, ಸಿದ್ಧಾಪುರ ಗ್ರಾಮದ ಪುಷ್ಪ ಎಂಬವರ ಮನೆ ಮಳೆಯಿಂದ ಹಾನಿಯಾಗಿ 15ಸಾವಿರ ರೂ., ಸಂಜೀವ ಶೆಡ್ತಿ ಎಂಬವರ ಮನೆಗೆ ಹಾನಿಯಾಗಿ 20ಸಾವಿರ ರೂ., ಆಟಲ್‌ಜಿ ನಗರದ ಪ್ರೇಮ ಎಂಬವರ ಮನೆಗೆ ಹಾನಿಯಾಗಿ 20ಸಾವಿರ ರೂ., ಜ್ಯೋತಿ ಶೆಟ್ಟಿ ಎಂಬವರ ಮನೆಗೆ ಹಾನಿಯಾಗಿ 15ಸಾವಿರ ರೂ. ನಷ್ಟ ಉಂಟಾಗಿದೆ.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಐತ ಪೂಜಾರಿ ಎಂಬವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಸುಮಾರು 50,000ರೂ. ಹಾಗೂ ಅಂಪಾರು ಗ್ರಾಮದ ಪಾರ್ವತಿ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ ಅಪಾರ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.