‘ಬಲೇ ಕೆಸರ್ಡ್ಡ್ ಗೊಬ್ಬುಗ’ ಸಂಭ್ರಮ: ಹುಲಿಕುಣಿತಕ್ಕೆ ಹೆಜ್ಜೆ ಹಾಕಿದ ಉಡುಪಿ ಡಿಸಿ
ಉಡುಪಿ: ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ, ಪರೀಕ ಆಶ್ರಯದಲ್ಲಿ ’ಬಲೇ ಕೆಸರ್ಡ್ ಗೊಬ್ಬುಗ’ (ಬನ್ನಿ ಕೆಸರಿನಲ್ಲಿ ಆಡುವ) ವಿನೂತನ ಗ್ರಾಮೀಣ ಕ್ರೀಡಾಕೂಟವನ್ನು ಪರೀಕ ಅರಮನೆಯ ಬಾಕ್ಯಾರು ಗದ್ದೆಯಲ್ಲಿ ರವಿವಾರ ಆಯೋಜಿಸಲಾಗಿತ್ತು.
ಗ್ರಾಮದ ನೂರಾರು ಮಂದಿ ಕೆಸರಿನ ಮೈದಾನದಲ್ಲಿ ನಡೆದ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟಗಳಲ್ಲಿ ಉತ್ಸಾಹ ದಿಂದ ಪಾಲ್ಗೊಂಡು ಸಂಭ್ರಮಿಸಿದರು. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆ ಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿ ಗಾಗಿ ’ನಿಧಿ ಶೋಧನೆ’ ಎಂಬ ವಿನೂತನ ಸ್ಪರ್ಧೆಯೂ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕುಟುಂಬ ಸಮೇತರಾಗಿ ಪಾಲ್ಗೊಂಡರು. ಈ ವೇಳೆ ಅವರು ಹುಲಿಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಗ್ರಾಮಸ್ಥರು ಹೆಜ್ಜೆಹಾಕಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಜನರೊಂದಿಗೆ ಬೆರೆತು ಕ್ರೀಡಾಕೂಟದ ಉತ್ಸಾಹವನ್ನು ಹಂಚಿಕೊಂಡ ಜಿಲ್ಲಾಧಿಕಾರಿಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.