ಉಡುಪಿ| ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಠಿಸುವ ಪೋಸ್ಟ್: ಪ್ರಕರಣ ದಾಖಲು
ಉಡುಪಿ, ಜು.6: ಕಾರ್ಕಳ ಶಾಸಕ ಸುನೀಲ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್ ಹಾಕಿರುವ ಬಗ್ಗೆ ಉಡುಪಿ ಮತ್ತು ಕಾರ್ಕಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಪರಶುರಾಮರ ಮೂರ್ತಿಯ ಚಿತ್ರವನ್ನು ವಿಕಾರಗೊಳಿಸಿ ಅದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮುಖವನ್ನು ಅಳವಡಿಸಿದಂತೆ ವಿನ್ಯಾಸಗೊಳಿಸಿ ಗುರು ಪಿ.ಉದ್ಯಾವರ ಎಂಬ ಫೇಸ್‌ಬುಕ್ ಖಾತೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಈ ಕೃತ್ಯವು ಸಮಾಜದ ಶಾಂತಿಯನ್ನು ಕೆಡಿಸುವ ಉದ್ದೇಶದಿಂದಲೇ ನಡೆದಿದೆ ಎಂದು ಸುಮಂತ್ ಶೆಟ್ಟಿಗಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ ಜು.1ರಂದು ಟ್ರೋಲ್ ಜೋಲಿಗೆ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಅವರ ಎಐ ಪೋಟೋ ಬಳಸಿ ಪರೋಕ್ಷವಾಗಿ, ಒಂದು ಕೋಮಿನ ವಿರುದ್ಧ ಪ್ರಚೋದನಾಕಾರಿ ಕಮೆಂಟ್ ಮಾಡಿ, ಕೋಮು ಪ್ರಚೋದನೆ ಉಂಟು ಮಾಡಿ, ಅಶಾಂತಿ ಸೃಷ್ಠಿಸಿ ಸಾರ್ವಜನಿಕ ನೆಮ್ಮದಿಗೆ ಭಂಗ ತರಲು ಪ್ರಯತ್ನಿಸಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಎರಡು ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗಿದ್ದು, ಆರೋಪಿಗಳ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರತ್ವ, ದ್ವೇಷ ಮತ್ತು ವೈಮನಸ್ಯ ಕೋಮು ಪ್ರಚೋದನೆ ಉಂಟು ಮಾಡಿ, ಸಮಾಜದಲ್ಲಿ ಅಶಾಂತಿ ಸೃಷ್ಠಿಸಿ ಸಾರ್ವಜನಿಕ ನೆಮ್ಮದಿಗೆ ಭಂಗ ತರಲು ಪ್ರಯತ್ನಿಸು ತ್ತಿರುವವರ ವಿರುದ್ಧ ಸೂಕ್ತವಾದ ಕಾನೂನು ರೀತಿಯಲ್ಲಿ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.