ಅಕ್ಕಪಡೆ ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆ: ಕಾಣೆಯಾಗಿದ್ದ ಬಾಲಕ ಬಸ್‌ನಿಲ್ದಾಣದಲ್ಲಿ ಪತ್ತೆ

Update: 2026-07-24 21:24 IST

ಉಡುಪಿ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನನ್ನು ಉಡುಪಿಯ ಅಕ್ಕ ಪಡೆ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪತ್ತೆಹಚ್ಚಿ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಉಡುಪಿ ಜಿಲ್ಲಾ ಕಂಟ್ರೋಲ್ ರೂಮ್‌ನಿಂದ ಅಕ್ಕ ಪಡೆಗೆ ಕರೆ ಬಂದಿದ್ದು, 8ನೇ ತರಗತಿಯ ಬಾಲಕನೊಬ್ಬ ಕಾಣೆಯಾ ಗಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದ ತಕ್ಷಣ ಅಕ್ಕ ಪಡೆ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿ ಬಾಲಕನ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದು ಈ ವೇಳೆ ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಪರಿಶೀಲನೆ ನಡೆಸುತ್ತಿದ್ದಾಗ, ಕಾಣೆಯಾಗಿದ್ದ ಬಾಲಕನು ಮುದ್ದೇಬಿಹಾಳಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಇರುವುದನ್ನು ಗಮನಿಸಿದರು.

ತಕ್ಷಣ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಬಸ್ಸನ್ನು ನಿಲ್ಲಿಸಿ ಬಾಲಕನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು. ಬಾಲಕನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಹಿಳಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News