ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆ
ಕುಂದಾಪುರ, ಜು.24: ಜೂನ್ ತಿಂಗಳಿನಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 4.86 ಕೋಟಿ ರೂ., ಅನ್ನಭಾಗ್ಯ ಯೋಜನೆಯಲ್ಲಿ 2.66 ಕೋಟಿ ರೂ., ಯುವನಿಧಿ ಯೋಜನೆಯಲ್ಲಿ 5.07 ಲಕ್ಷ ರೂ., ಶಕ್ತಿ ಯೋಜನೆಯಲ್ಲಿ 3.16 ಕೋಟಿ ರೂ. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ 4.38 ಕೋಟಿ ರೂ. ಸೇರಿದಂತೆ ಒಟ್ಟು ಸುಮಾರು 16 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದಕ್ಕೆ ಮೊದಲು ಮೇ ತಿಂಗಳಲ್ಲಿ ಒಟ್ಟು 15.12 ಕೋಟಿ ರೂ. ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಪಂಚಗ್ಯಾರಂಟಿ ಯೋಜನೆಗಳಲ್ಲಿ ಕುಂದಾಪುರಕ್ಕೆ ಒಟ್ಟು 597,62,71,084 ರೂ. ಹಣ ಬಿಡುಗಡೆಯಾಗಿದೆ ಎಂದವರು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಈಗ ನಡೆಯುತ್ತಿದ್ದು, ಈ ಯೋಜನೆಯಡಿ ಒಟ್ಟು 73,868 ನೊಂದಣಿ ಯಾಗಿದ್ದು, 48,322ರ ಪರಿಷ್ಕರಣೆ ಪೂರ್ಣಗೊಂಡಿದೆ. 25,546 ಅರ್ಜಿಗಳು ಬಾಕಿ ಇವೆ. ಬಾಕಿ ಇರುವ ಅರ್ಜಿಗಳ ಪೈಕಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಇರುವ ಸಾಧ್ಯತೆಗಳಿರುತ್ತವೆ. ಅಲ್ಲದೆ ಕೀಪ್ಯಾಡ್ ಮೊಬೈಲ್ ಇಲ್ಲದಿರು ವವರು ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲರೂ ಸೇರಿಕೊಂಡು ಅಂತಹ ಫಲಾನುಭವಿ ಗಳಿಗೆ ಪರಿಷ್ಕರಣೆ ಮಾಡಲು ಸಹಕಾರ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ ಕೂಡ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪೋರ್ಟಲ್‌ನಲ್ಲಿ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಮರಣ ಹೊಂದಿದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಹಣ ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದವರು ಈ ಸಂದರ್ಭ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಫೆಬ್ರವರಿ ತಿಂಗಳ ತನಕ ಹಣ ಪಾವತಿ ಯಾಗಿದೆ. ಕುಂದಾಪುರ ತಾಲೂಕಿನಲ್ಲಿ 1705 ಮರಣ ಹೊಂದಿದವರ ಖಾತೆಗೆ ಸುಮಾರು 5 ಕೋಟಿ ರೂ. ಜಮೆ ಆಗಿದ್ದು, ಈ ಪೈಕಿ 16 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಯಿಂದ ವಿದ್‌ಡ್ರಾ ಮಾಡಿಕೊಂಡಿದ್ದಾರೆ. 13 ಲಕ್ಷ ರೂ.ಗಳನ್ನು ಫ್ರೀಝ್ ಮಾಡಲಾಗಿದ್ದು, 19 ಲಕ್ಷ ರೂ. ವಾಪಾಸ್ ಕಟ್ಟಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಕುಂದಾಪುರದಲ್ಲಿ ಸುಮಾರು 17 ಸಾವಿರ ಮನೆಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು 11 ಸಾವಿರ ಮನೆಗಳ ಪರಿಶೀಲನೆ ಕಾರ್ಯ ಬಾಕಿ ಇದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಲೈನ್‌ಮ್ಯಾನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡುವ ಕಾರ್ಯವಾಗದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಈ ಮರಗಳು ಬಿದ್ದರೆ ವಿದ್ಯುತ್ ಸರಬರಾಜಿಗೆ ಸಮಸ್ಯೆಯಾಗುತ್ತದೆ. ಕಂಬಗಳು ಮುರಿದು ಹೋಗುತ್ತವೆ. ಕೂಡಲೇ ತೆರವು ಮಾಡ ಬೇಕು ಎಂದು ಸದಸ್ಯರು ಆಗ್ರಹಿಸಿದರು. ಮೆಸ್ಕಾಂ ಅಧಿಕಾರಿಗಳು ಮಾತನಾಡಿ ಈಗಾಗಲೇ ಕೆಲವು ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದರು.
ಸಾಕಷ್ಟು ಸಭೆಗಳಲ್ಲಿ ಮನವಿ ಮಾಡುತ್ತಿದ್ದರೂ ಹಕ್ಲಾಡಿ ಮತ್ತು ಆಲೂರು ಮಾರ್ಗಕ್ಕೆ ಬಸ್ ಕಲ್ಪಿಸಲಾಗಿಲ್ಲ. ಶಾಲಾ ಕಾಲೇಜು ಸಮಯಕ್ಕಾದರೂ ಬಸ್ ಓಡಿಸಿ ಎಂದು ಸದಸ್ಯ ಅರುಣ ಮನವಿ ಮಾಡಿದರು. ಹೇರಿಕುದ್ರು ಬಸ್ ತಂಗುದಾಣದಲ್ಲಿ ಕೆಎಸ್ಸಾರ್ಟಿಸಿ ಲೋಕಲ್ ಬಸ್ ನಿಲ್ಲಿಸುತ್ತಿಲ್ಲ ಎಂದು ಅಭಿಜಿತ್ ಪೂಜಾರಿ ದೂರಿದರು. ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು. ಈ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದರು.
ಗಂಗೊಳ್ಳಿಯಲ್ಲಿ ಪಡಿತರ ಅಂಗಡಿ ಸಮೀಪ ಪಡಿತರ ಪಡೆಯುವ ವೇಳೆ ಗಲಾಟೆ ನಡೆದಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯ ಜಹೀರ್ ಅಹಮ್ಮದ್ ಆಗ್ರಹಿಸಿದರು. ಫಲಾನುಭವಿಗಳು ಪಡಿತರ ಪಡೆಯುವ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಡಿತರ ಅಂಗಡಿ ಸಮೀಪ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.