ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ: ಮಣಿಪಾಲದಲ್ಲಿ ವಿದ್ಯಾರ್ಥಿ ಸಮೂಹದಿಂದ ಬೃಹತ್ ಪ್ರತಿಭಟನೆ
ಉಡುಪಿ, ಜು.24: ನೀಟ್ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಸೋರಿಕೆಯನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಿಲ್ಲೆಯ ಸಾವಿರಾರು ಮಂದಿ ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಮಣಿಪಾಲದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮಣಿಪಾಲ ಕಾಯಿನ್ ಸರ್ಕಲ್ ಬಳಿಯಿಂದ ಡಿಸಿ ಕಚೇರಿ ತನಕದ ರ್ಯಾಲಿನಲ್ಲಿ ಸಾಗಿಬಂದ ಈ ವಿದ್ಯಾರ್ಥಿಗಳು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ನಿರಂತರ ಘೋಷಣೆ ಗಳನ್ನು ಕೂಗಿದರು. ಭಾರತ್ ಮಾತೆಗೆ ಜೈಕಾರ ಮೊಳಗಿಸಿದ ತಕ್ಷಣವೇ, ಹುದ್ದೆಯಿಂದ ಕೆಳಗಿಳಿದು ವಿದ್ಯಾರ್ಥಿಗಳಿಗೆ ನ್ಯಾಯ ನೀಡುವಂತೆ ಆಗ್ರಹಿಸಿದರು.
ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಈ ವಿಷಯದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವನ್ನು ಸೂಚಿಸಿದರು. ಜಿಲ್ಲಾಕಾರಿಗಳ ಕಚೇರಿಯ ಸತ್ಯಾಗ್ರಹ ಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ವೈವಿಧ್ಯಮಯ ಘೋಷಣಾ ಫಲಕ, ಕರಪತ್ರಗಳನ್ನು ಪ್ರದರ್ಶಿಸಿದರು.
ಕೇಂದ್ರ ಸರಕಾರದ ವೈಫಲ್ಯದಿಂದ ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ಯಾಗಿದ್ದು, 20ಕ್ಕೂ ಅಧಿಕ ಮಂದಿ ವಿದ್ಯಾರ್ಥಿ ಗಳು ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಇದು ದುರಂತ ಎಂದು ಸಾರಿದ ವಿದ್ಯಾರ್ಥಿಗಳು ಮೌನ ಪ್ರಾರ್ಥನೆ ಮಾಡುವ ಮೂಲಕ ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೋಹನ್ ಮಚಾದೋ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಶಿಕ್ಷಣ ಪಡೆ ಯುವ ಸಲುವಾಗಿ ಸಾಕಷ್ಟು ವರ್ಷ ಗಳನ್ನು ಮೀಸಲಿಡುತ್ತೇವೆ. ಆದರೆ ನಮ್ಮನ್ನು ಆಳುವ ಸರಕಾರ ನಾಚಿಕೆ ಬಿಟ್ಟು ಕುಳಿತುಕೊಂಡಿದೆ. ಶಿಕ್ಷಣ ಸಚಿವ ಯಾವುದೇ ಕಾರಣಕ್ಕೂ ಹುದ್ದೆಯಲ್ಲಿ ಮುಂದುವರಿಬಾರದು. ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.
ವಿದ್ಯಾರ್ಥಿ ನಾಯಕಿ ಜೂನ್ ಮೆಹತಿ ಕೊಲ್ಕತ್ತಾ ಮಾತನಾಡಿದರು. ಉಡುಪಿ ಸಹಬಾಳ್ವೆ ಅಧ್ಯಕ್ಷ ಪ್ರೊ.ಕೆ. ಫಣಿರಾಜ್, ಮುಖಂಡ ವಿಶ್ವಾಸ್ ಅಮೀನ್, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಶ್ಯಾಮ್‌ರಾಜ್ ಬಿರ್ತಿ, ಪ್ರಶಾಂತ್ ಬಿರ್ತಿ, ಪ್ರಕಾಶ್ ಹೇರೂರು, ಎಸ್‌ಐಒ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ ಉಪಸ್ಥಿತರಿದ್ದರು.