ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರಿಗೆ ತರಬೇತಿ ಕಾರ್ಯಾಗಾರ
ಕುಂದಾಪುರ, ಜು.31: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಹಾಗೂ ಕುಂದಾಪುರ-2 ತಾಲೂಕಿನ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರಿಗೆ ತರಬೇತಿ ಕಾರ್ಯಾಗಾರವನ್ನು ಕುಂದಾಪುರದ ವಿಶ್ವ ಬ್ರಾಹ್ಮಣ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಮಾಂಡರ್ ಅಧಿಕಾರಿ ಶಾಂತಿಲಾಲ್ ಜಟಿಲಾ ಮಾತನಾಡಿ, ಧರ್ಮಸ್ಥಳದ ಶೌರ್ಯ ವಿಪತ್ತು ತಂಡದ ಕೆಲಸವು ಸೇವಾ ಮನೋಭಾವನೆಯಿಂದ ಕೂಡಿದ್ದು, ತುರ್ತು ವಿಪತ್ತಿನ ಸಂದರ್ಭದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಸೇವೆಗೆ ಸಿದ್ಧ ಎನ್ನುವ ಮನೋಭಾವನೆಯಿಂದ ದುಡಿಯುತ್ತಿರುವ ತಂಡದ ಸ್ವಯಂಸೇವಕರ ಶಕ್ತಿ ಮೆಚ್ಚುವಂತಹದ್ದು. ಈ ಸೇವೆಯು ದೇಶಸೇವೆಗೆ ಸಮಾನವಾಗಿದೆ. ಇಲ್ಲಿನ ಶೌರ್ಯ ಸ್ವಯಂಸೇವಕರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ತಮ್ಮ ಸೇವೆಯ ಮೂಲಕ ಸಮಾಜದ ವಿಪತ್ತು ಸಂದರ್ಭದಲ್ಲಿ ಸಹಕರಿಸುತ್ತಿದ್ದೀರಿ ನಿಮ್ಮೇಲ್ಲರ ಈ ಸೇವಾ ಮನೋಭಾವನೆ ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಪೋಲೀಸ್ ಠಾಣೆಯ ಪೋಲೀಸ್ ನಿರೀಕ್ಷಕ ಜಯರಾಮ್ ಡಿ.ಗೌಡ ಮಾತನಾಡಿ, ಧರ್ಮಸ್ಥಳದ ಶೌರ್ಯ ವಿಪತ್ತು ಘಟಕದವರು ತುರ್ತು ಪರಿಸ್ಥಿತಿಯಲ್ಲಿ ಪೋಲೀಸ್ ಇಲಾಖೆಯವ ರೊಂದಿಗೆ ಸಹಕರಿಸುತ್ತಿದ್ದು, ನಮ್ಮ ಸಮಾಜದ ಶಕ್ತಿ ಆಗಿದ್ದಾರೆ. ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ಸ್ವಯಂ ಸೇವಕರು ತಮ್ಮ ಜೀವನದ ಸುರಕ್ಷತೆಯ ಬಗ್ಗೆ ವಿಶೇಷ ಗಮನಹರಿಸಿ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ರಚನೆಯ ಉದ್ದೇಶ ಹಾಗೂ ಅದರ ಕಾರ್ಯ ಸ್ವರೂಪಗಳ ಕುರಿತು ಮಾಹಿತಿ ನೀಡಿದರು. ಕೇಂದ್ರ ಕಛೇರಿಯ ಶೌರ್ಯ ವಿಪತ್ತು ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕುಂದಾಪುರ ತಾಲೂಕಿನ ನಿಕಟಪೂರ್ವ ಜನಜಾಗೃತಿ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು, ಕುಂದಾಪುರ-1 ಶೌರ್ಯ ಸಮಿತಿಯ ಮಾಸ್ಟರ್ ಶಶಿಕಾಂತ್ ಹಾಗೂ ಕುಂದಾಪುರ-2 ಶೌರ್ಯ ಸಮಿತಿ ಮಾರ್ಸ್ಟ ರಾಜಶೇಖರ್, ಜನಜಾಗೃತಿ ಮೇಲ್ವಿಚಾರಕ ಗಣೇಶ್ ಉಪಸ್ಥಿತರಿದ್ದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಎಸ್‌ಐ ಸುಭಾಷ್ ಶಿಂಧೆ ನೇತೃತ್ವದ ತಂಡದಿಂದ ತುರ್ತು ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಿದರು. ಯೋಜನಾಧಿಕಾರಿಗಳಾದ ಉಮೇಶ್ ಶೆಟ್ಟಿ ಸ್ವಾಗತಿಸಿ, ಸುಧೀರ್ ಹಂಗಳೂರು ವಂದಿಸಿದರು. ಕುಂದಾಪುರ ವಲಯದ ಮೇಲ್ವಿಚಾರಕಿ ಶಕುಂತಲಾ ನಿರೂಪಿಸಿದರು.