ನಿವೃತ್ತ ನ್ಯಾಯಾಧೀಶ ಅಬ್ದುಲ್ ರಹೀಂಗೆ ಸನ್ಮಾನ

Update: 2026-07-31 21:11 IST

ಕುಂದಾಪುರ, ಜು.31: ಕುಂದಾಪುರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ 4 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಇದೀಗ ವಯೋ ನಿವೃತ್ತರಾದ ಅಬ್ದುಲ್ ರಹೀಂ ಅಬ್ದುಲ್ ಹುಸೇನ್ ಶೇಖ್ ಅವರಿಗೆ ಕುಂದಾಪುರ ವಕೀಲರ ಸಂಘದ ವತಿಯಿಂದ ಸಮ್ಮಾನ ಸಮಾರಂಭವನ್ನು ಶುಕ್ರವಾರ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್ ಮಾತ ನಾಡಿ, ನ್ಯಾ.ಅಬ್ದುಲ್ ರಹೀಂ ಹುಸೇನ್ ಶೇಖ್ ನ್ಯಾಯದಾನದ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿ ದ್ದಾರೆ. ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಾಗಿದ್ದರೂ, ಜೀವನ ಸವಿಯುವ ರೀತಿ ಮಾತ್ರ ತುಸು ವಿಭಿನ್ನ. ನ್ಯಾಯಾಧೀಶರಿಗೆ ಇತಿಮಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆದರೆ ನ್ಯಾಯವಾದಿಗಳಿಗೆ ಜೀವನ ನೋಡುವ ವಿಚಾರದಲ್ಲಿ ಸ್ವಲ್ಪ ಸ್ವಾತಂತ್ರ್ಯ ಜಾಸ್ತಿ ಎಂದರು.

ಈ ಸಂದರ್ಭದಲ್ಲಿ ನ್ಯಾ.ಅಬ್ದುಲ್ ರಹೀಂ ಅಬ್ದುಲ್ ಹುಸೇನ್ ಶೇಖ್ ಹಾಗೂ ಯಾಸ್ಮಿನ್ ದಂಪತಿಯನ್ನು ಸಮ್ಮಾನಿ ಸಲಾಯಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ., ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಮಂಜುಳಾ ಬಿ., ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶ್ರೀನಿವಾಸ ಕೆ.ಆರ್., ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸೈಯದ್ ಸಿಮ್ರಾನ್, ವಕೀಲರ ರಾಜ್ಯ ಸಂಘದ ಸದಸ್ಯೆ ಶ್ಯಾಮಲಾ ಭಂಡಾರಿ ಮಾತನಾಡಿದರು.

ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮಣಿಕಂಠ ಎಂ.ಎಸ್., ಸರಕಾರಿ ಅಭಿಯೋಜಕ ಉದಯ ಕುಮಾರ್ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ಜೆ.ರಾವ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಚಂದ್ರ ಶೆಟ್ಟಿ ವಂದಿಸಿದರು. ವಕೀಲ ಕೆ.ಬಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News