ಯಕ್ಷಗಾನ ಕಲಾವಿದ ಶ್ರೀಧರ ಭಟ್ ನಿಧನ
ಉಡುಪಿ, ಜು.31: ಬಡಗು ತಿಟ್ಟಿನ ಪ್ರತಿಭಾವಂತ ಹಾಸ್ಯಕಲಾವಿದ ಕಾಸರಕೋಡು ಶ್ರೀಧರ ಸುಬ್ರಾಯ ಭಟ್( 51) ಇಂದು ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಕೆರೆಮನೆ ಶಿವರಾಮ ಹೆಗಡೆ ಮತ್ತು ದೊಡ್ಡತಂದೆ ನರಸಿಂಹ ಭಟ್ಟರಿಂದ ಪ್ರೇರಿತರಾಗಿ ಹದಿನಾರರ ಹರೆಯದಲ್ಲೇ ಕೆರೆಮನೆ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ಯಕ್ಷಗಾನ ಕಲಿತು ಹದಿನೆಂಟನೆ ವಯಸ್ಸಿಗೆ ಮೇಳ ಸೇರಿದ ಶ್ರೀಧರ ಭಟ್ಟರು 33 ವರ್ಷಗಳ ಕಲಾಸೇವೆ ಮಾಡಿದ್ದಾರೆ. ಇಡಗುಂಜಿ, ಸಾಲಿಗ್ರಾಮ, ಮಂದಾರ್ತಿ , ಗುಂಡಬಾಳ ಮೇಳಗಳಲ್ಲಿ 13 ವರ್ಷಗಳ ತಿರುಗಾಟ ಮಾಡಿ ಮುಂದೆ ವಿವಿಧ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು.
ಯಾರ ಅನುಕರಣೆಯೂ ಇಲ್ಲದ ತುಂಬಾ ಚುರುಕಿನ ಮಾತು, ಕುಣಿತ, ಅಭಿನಯಗಳಿಂದ ಕಲಾರಸಿಕರಿಗೆ ಸಂತೋಷ ನೀಡುತ್ತಿದ್ದರು. ಚಂದಗೋಪ, ರಜಕ, ನಂದಿಶೆಟ್ಟಿ, ಬೇಹಿನಚರ, ಅಜ್ಜಿ ಹೀಗೆ ಎಲ್ಲಾ ರೀತಿಯ ಪೌರಾಣಿಕ ಹಾಸ್ಯಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ಚಂಡೆವಾದನ ದಲ್ಲೂ ಪರಿಣತರಾಗಿದ್ದರು. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.