ಕುಂದಾಪುರ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

Update: 2026-08-10 18:50 IST

ಕುಂದಾಪುರ, ಆ.10: ಕ್ರೀಡೆಯಲ್ಲಿ ತೊಡಗಿಸಿಕೊಂಡರೆ, ಸದೃಢತೆ ಹಾಗೂ ಆರೋಗ್ಯವೂ ವೃದ್ಧಿಯಾಗುತ್ತದೆ. ಗಾಂಧಿ ಮೈದಾನದಲ್ಲಿ ನಿರ್ಮಾಣವಾಗಿ ರುವ ಈ ವಾಲಿಬಾಲ್ ಕೋರ್ಟ್‌ನಿಂದ ಕುಂದಾಪುರದ ಯುವ ಕ್ರೀಡಾ ಪಟುಗಳಿಗೆ ಉತ್ತಮ ತರಬೇತಿ ಪಡೆಯಲು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕುಂದಾಪುರ ಗಾಂಧಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇದೇ ವೇಳೆ ಆಯೋಜಿಸಿದ 6 ತಂಡಗಳ ನಡುವಿನ ವಾಲಿಬಾಲ್ ಪಂದ್ಯಾಟವನ್ನು ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರ ನಾಗರಾಜ್ ಹೆಗ್ಡೆ ಉದ್ಘಾಟಿಸಿ, ಶುಭಹಾರೈಸಿದರು.

ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಕ್ರೀಡಾಂಗಣದ ಬೆಳಕಿನ ವ್ಯವಸ್ಥೆ ಉದ್ಘಾಟಿಸಿದರು. ಕುಂದಾಪುರ ಫ್ರೆಂಡ್ಸ್‌ನ ಗೌರವಾಧ್ಯಕ್ಷ ರಾಜೇಶ್ ಕಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಂದಾಪುರ ತಾಲೂಕು ಯುವ ಜನ ಸೇವಾ ಮತ್ತು ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಸತ್ಯನಾರಾಯಣ ಜಿ., ವಿವಿಧ ಪಕ್ಷಗಳ ಮುಖಂಡರು, ಕ್ರೀಡಾ ಸಂಘಗಳ ಪದಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು. ಭಾಸ್ಕರ ವಿಠಲವಾಡಿ ನಿರೂಪಿಸಿ, ವಾಲಿಬಾಲ್ ಮಾಜಿ ಆಟಗಾರ ಸಮೀರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News