ಮನೆಗೆ ನುಗ್ಗಿ 12 ಲಕ್ಷ ರೂ. ಮೌಲ್ಯದ ಸೊತ್ತು ಕಳವು: ಪ್ರಕರಣ ದಾಖಲು
ಉಡುಪಿ, ಆ.10: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳವು ಮಾಡಿರುವ ಘಟನೆ ಕೊಡಂಕೂರು ಸಾಯಿಬಾಬಾ ನಗರ ಎಂಬಲ್ಲಿ ನಡೆದಿದೆ.
ಕೊಡಂಕೂರು ಸಾಯಿಬಾಬಾ ನಗರದ ಶಶಿರೇಖಾ ಬಿ. ಮೈಸೂರು ಜಿಲ್ಲೆಯ ಹೂನಸೂರು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದು ಬೆಸಿಗೆ ರಜೆಯಲ್ಲಿ ಊರಿಗೆ ಬಂದವರು ಮೇ 25ರಂದು ರಾತ್ರಿ ಮನೆಗೆ ಬೀಗ ಹಾಕಿ ಮೈಸೂರಿಗೆ ಹೋಗಿದ್ದರು. ಆ.9ರಂದು ರಾತ್ರಿ ಇವರು ತನ್ನ ಪತಿ ಜೊತೆ ಬಂದು ಮನೆಯ ಬೀಗ ತೆಗೆದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರು ಮೊದಲು ಮನೆಯ ಪ್ರವೇಶದ್ವಾರವನ್ನು ಮುರಿಯಲು ಪ್ರಯತ್ನಿಸಿ ನಂತರ ಮನೆಯ ಇನ್ನೊಂದು ಬದಿಯ ಗೋಡೆಯನ್ನು ಹತ್ತಿ ಟೆರಿಸ್ ಮೇಲಿನ ಬಾಗಿಲನ್ನು ಮುರಿದು ಒಳನುಗ್ಗಿದ್ದರು. ಮನೆಯ ಬೆಡ್ ರೂಂನ ಕಾಬೋರ್ಟ್ ನಲ್ಲಿಟ್ಟಿದ್ದ 10,00,000ರೂ. ಮೌಲ್ಯದ ಚಿನ್ನದ ಸರ, ಚಿನ್ನದ ಕಾಯಿನ್‌ಗಳು ಹಾಗೂ ಇನ್ನೊಂದು ಬೆಡ್ರೂಂನಲ್ಲಿದ್ದ 1 ಕೆಜಿ 650 ಗ್ರಾಂ ತೂಕದ ಬೆಳ್ಳಿಯ ಚೆಂಬು, ಬೆಳ್ಳಿಯ ಹರಿವಾಣ, ಬೆಳ್ಳಿಯ ಪಂಚಪಾತ್ರೆ, ಬೆಳ್ಳಿಯ ತಟ್ಟೆ ಹಾಗೂ ದೇವರ ಕೋಣೆಯಲ್ಲಿಟ್ಟಿದ್ದ ಬೆಳ್ಳಿಯ ಹರಸಿನ ಕುಂಕುಮ ಬಟ್ಟಲು, ಬೆಳ್ಳಿಯ ದೀಪಗಳು, ಬೆಳ್ಳಿಯ ಕಾಲು ಚೈನ್ ಮತ್ತು 40,000ರೂ. ನಗದು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 12,00,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.