ಗಣೇಶ ಅಮೀನಗಡ ‘ರಂಗ ಪ್ರಸಂಗ’ ಕೃತಿಗೆ ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪ್ರಶಸ್ತಿ’

Update: 2026-08-10 19:22 IST

ಉಡುಪಿ: ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ ಅಂಬಾತನಯ ಮುದ್ರಾಡಿ ಅವರ ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು ನೀಡುವ ವಾರ್ಷಿಕ ಪುಸ್ತಕ ಪ್ರಶಸ್ತಿಯ ಮೂರನೇ ವರ್ಷದ ಪುರಸ್ಕಾರಕ್ಕೆ ರಂಗಕರ್ಮಿ ಗಣೇಶ ಅಮೀನಗಡ ಅವರ 'ರಂಗ ಪ್ರಸಂಗ' ಪುಸ್ತಕ ಆಯ್ಕೆಯಾಗಿದೆ.

ತಲ್ಲೂರ್ ಫ್ಯಾಮಿಲಿ ಟ್ರಸ್ಟ್ (ರಿ) ಉಡುಪಿ ಪ್ರಾಯೋಜಕತ್ವದ ಈ ಪ್ರಶಸ್ತಿಯು 15 ಸಾವಿರ ರೂ‌. ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಂಗಭೂಮಿ (ರಿ) ಉಡುಪಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವತಂತ್ರ, ಸೃಜನಶೀಲ ನಾಟಕ ಕೃತಿ ಮತ್ತು ಗಂಭೀರ ಚಿಂತನೆಯ ನಾಟಕೇತರ ಕೃತಿಗಳಿಗೆ ಪರ್ಯಾಯ ವರ್ಷಗಳಲ್ಲಿ ನೀಡಲಾಗುವ ಈ ಪ್ರಶಸ್ತಿಯು ಈ ವರ್ಷ ನಾಟಕೇತರ ಪುಸ್ತಕಕ್ಕೆ ಮೀಸಲಿತ್ತು. ಹಿಂದಿನ ಎರಡು ವರ್ಷಗಳಲ್ಲಿ (2024-2025) ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾಕೃತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದ ಗಣೇಶ ಅಮೀನಗಡರ 'ರಂಗ ಪ್ರಸಂಗ' ಕೃತಿಯು ಅವರ ಸುದೀರ್ಘ ರಂಗಭೂಮಿ ಒಡನಾಟದ ದಾಖಲೆಯಂತಿದೆ. ಇದರ ಮೂಲಕ ಸಾಧ್ಯವಾಗುವ ತಿಳಿವಿನ ಹೊಳಹುಗಳನ್ನು ಗುರುತಿಸಿ, ತೀರ್ಪುಗಾರರ ಸಮಿತಿಯು ಅವರ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆಯೆಂದು ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ ಭಟ್ಟರು ತಿಳಿಸಿದ್ದಾರೆ.

ʼವಾರ್ತಾಭಾರತಿʼ ದಿನಪತ್ರಿಕೆಯಲ್ಲಿ ಪ್ರತಿ ಶುಕ್ರವಾರ ಗಣೇಶ ಅಮೀನಗಡ ಅವರು ಬರೆಯುವ 'ರಂಗ ಪ್ರಸಂಗ' ಅಂಕಣದ ಆಯ್ದ ಲೇಖನಗಳ ಸಂಕಲನವಿದು ಎಂದು ಅವರು ಹೇಳಿದ್ದಾರೆ.



 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News