ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ
ಕುಂದಾಪುರ, ಆ.18: ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿತ ಆಟೋರಿಕ್ಷಾ ಮಜ್ದೂರ್ ಸಂಘ ಕುಂದಾಪುರ ತಾಲೂಕು ಮತ್ತು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘ ಕುಂದಾಪುರ ಇದರ ವತಿಯಿಂದ ಕುಂದಾಪುರ ತಾಲೂಕೂ ಸೌಧದ ಮುಂಭಾಗ ಮಂಗಳವಾರ ಧರಣಿ ನಡೆಸಲಾಯಿತು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಗೆ ಪ್ರಯೋಜನ ಶೂನ್ಯ ಯೋಜನೆ ಗಳಾದ ಪ್ರಿವೆಂಟೀವ್ ಹೆಲ್ತ್ ಕೇರ್ ಚೆಕ್ ಅಪ್, ಆರೋಗ್ಯ ಸಂಚಾರಿ ಕ್ಲಿನಿಕ್ ಆರ್‌ಪಿಎಲ್ ತರಬೇತಿ, ವಿವಿಧ ರೀತಿ ಟೂಲ್ ಕಿಟ್, ಸುರಕ್ಷಾ ಕಿಟ್, ಕಾರ್ಮಿಕ ಸೇವಾ ಕೇಂದ್ರವನ್ನು ರದ್ದು ಪಡಿಸಬೇಕು ಹಾಗೂ ಈ ಯೋಜನೆಗಳ ಭ್ರಷ್ಟಾಚಾರದ ಕುರಿತು ತನಿಖೆಯಾಗಬೇಕು.
ರಾಜ್ಯದ ಇತರ ಜಿಲ್ಲೆಗಳಲ್ಲಿ ಇರುವಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಸ್ಥಳೀಯ ನದಿ ಹಳ್ಳಗಳಿಂದ ಮರಳು ಸಂಗ್ರಹ ಮತ್ತು ಸಾಗಾಣಿಕೆಗೆ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಪರವಾನಿಗೆ ಲಭಿಸುವಂತಾಗಬೇಕು. ಕೆಂಪು ಕಲ್ಲಿನ ದರ ಏರಿಕೆಯನ್ನು ನಿಯಂತ್ರಿಸಬೇಕು. ಕಾರ್ಮಿಕರ ವೈದ್ಯಕೀಯ ಚಿಕಿತ್ಸೆಯ ಮರುಪಾವತಿಯ ಅವ್ಯವಸ್ಥೆಯನ್ನು ಸರಿಪಡಿಸಿ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ಲಭಿಸಬೇಕು.
ಕರ್ನಾಟಕ ಸರ್ಕಾರ ಜಾರಿ ತಂದಿರುವಂತಹ ಸಾರಿಗೆ ನೌಕರರ ಕಲ್ಯಾಣ ಮಂಡಳಿಯಲ್ಲಿ ಘೋಷಣೆ ಆಗಿರುವ ಎಲ್ಲಾ ಸೌಲಭ್ಯಗಳನ್ನು ಈ ಕೂಡಲೇ ನೀಡುವಂತಾಗಬೇಕು. ಆಟೋರಿಕ್ಷಾ ಮತ್ತು ಗೂಡ್ಸ್ ಟೆಂಪೋ ಹಾಗೂ ಖಾಸಗಿ ವಾಣಿಜ್ಯ ವಾಹನಗಳ ಚಾಲಕರಿಗೆ ಇಎಸ್‌ಐ ಹಾಗೂ ಪಿಎಫ್ ನೀಡಬೇಕು. ಆಟೋರಿಕ್ಷಾ ಮತ್ತು ಗೂಡ್ಸ್ ಟೆಂಪೋ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಈ ಕೂಡಲೇ ನೀಡುವಂತೆ ಜಾರಿಗೊಳಿಸಬೇಕು. ಎಲ್ಲಾ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ಪರಿಹಾರ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಈ ಕುರಿತ ಮನವಿಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಸಚಿವರಿಗೆ ಕುಂದಾಪುರ ಉಪತಹಶೀಲ್ದಾರ್ ವಿನಯ್ ಮೂಲಕ ಸಲ್ಲಿಸಲಾಯಿತು.
ಆಟೋರಿಕ್ಷಾ ಮಜ್ದೂರ್ ಸಂಘ ಕುಂದಾಪುರ ತಾಲೂಕು ಅಧ್ಯಕ್ಷ ಸುರೇಶ ಪುತ್ರನ್, ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘ ಕುಂದಾಪುರ ಅಧ್ಯಕ್ಷ ಗಿರೀಶ ಕುಂದಾಪುರ, ಭಾರತೀಯ ಮಜ್ದೂರ್ ಸಂಘದ ಪ್ರಮುಖ ರಾದ ಶಂಕರ ಅಂಕದಕಟ್ಟೆ, ಅಶೋಕ ಕೆರೆಕಟ್ಟೆ, ಅಶೋಕ ಪೂಜಾರಿ ಕೋಡಿ, ರಾಜು ದೇವಾಡಿಗ, ಸತೀಶ ಪ್ರಭು ಮೊದಲಾದವರು ಉಪಸ್ಥಿತರಿದ್ದರು.