ರಾ. ಹೆದ್ದಾರಿ-66ರಲ್ಲಿ ಬಾಕಿ ಉಳಿದ ಸರ್ವಿಸ್ ರಸ್ತೆ ಶೀಘ್ರವೇ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಆ.18:ಜಿಲ್ಲೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಾಕಿ ಉಳಿದು ಮಂಜೂರಾತಿಯನ್ನು ಪಡೆದಿರುವ ಸರ್ವಿಸ್ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ನಡೆಸಿ ಪೂರ್ಣಗೊಳಿಸುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಬಂಧಿಸಿದಂತೆ ನಡೆದಿರುವ ಸರ್ವಿಸ್ ರಸ್ತೆ, ಮೇಲ್ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಕಿ ಉಳಿದಿರುವ ಸರ್ವಿಸ್ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ನಿಗದಿತ ಅವಧಿ ಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ ಕೋಟೇಶ್ವರ ಜಂಕ್ಷನ್‌ನಿಂದ ಬೀಜಾಡಿ ಕ್ರಾಸ್‌ವರೆಗಿನ ಸುಮಾರು 830 ಮೀ. ಅನ್ನಪೂರ್ಣ ಹೋಟೆಲ್‌ನಿಂದ ಬೀಜಾಡಿ-ಕುಂಭಾಶಿ-ತೆಕ್ಕಟ್ಟೆ ಭಾಗದಲ್ಲಿ ಎರಡು ಬದಿ ಸುಮಾರು 3,500ಮೀ., ತೆಕ್ಕಟ್ಟೆ ಭಾಗದಲ್ಲಿ ಸುಮಾರು 1,020 ಮೀ., ಬ್ರಹ್ಮಾವರ ಭಾಗದಲ್ಲಿ ಸುಮಾರು 400ಮೀ., ಸಂತೆಕಟ್ಟೆ ಭಾಗದಲ್ಲಿ ಸುಮಾರು 1,000ಮೀ. ಉದ್ಯಾವರ ಜಂಕ್ಷನ್ ಭಾಗದಲ್ಲಿ ಸುಮಾರು 325 ಮೀ. ಸೇರಿದಂತೆ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ, ಸಾರ್ವಜನಿಕ ವಾಹನಗಳು ಪ್ರಯಾಣಿಸಲು ಮುಕ್ತ ಅವಕಾಶ ಮಾಡಿ ಕೊಡಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಮೇಲ್ಸೇತುವೆ, ಅಂಡರ್‌ಪಾಸ್ ಹಾಗೂ ಇತರ ಮೂಲ ಸೌಕರ್ಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಸಂಸದರು, ರಾ.ಹೆ ಯ ಕೆಲವು ಕಡೆಗಳಲ್ಲಿ ಇನ್ನೂ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿಲ್ಲ. ಚರಂಡಿಗಳ ನಿರ್ಮಾಣವೂ ಅಸಮರ್ಪಕತೆವಾಗಿ ಕಂಡು ಬರುತ್ತಿದೆ. ಸರ್ವಿಸ್ ರಸ್ತೆ ನಿರ್ಮಾಣ ಮಾಡುವಾಗ ಕಾಮಗಾರಿಗಳ ಗುಣಮಟ್ಟ ಹಾಗೂ ಸಂಚಾರ ಸುರಕ್ಷತಾ ಕ್ರಮಗಳನ್ನು ಕಾಯ್ದುಕೊಳ್ಳಬೇಕು ಎಂದರು.
ಉಡುಪಿಯ ನಿಟ್ಟೂರು ಮತ್ತು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯ ಬಳಿ ಸ್ಥಳ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಬೇಕು. ಸಂತೆಕಟ್ಟೆ ಪೆಟ್ರೋಲ್ ಬಂಕ್‌ನಿಂದ ಅಂಬಾಗಿಲು ಜಂಕ್ಷನ್‌ವರೆಗೆ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಮರಗಳ ತೆರವು ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಸಂಸದರು ಸಭೆಗೆ ಮಾಹಿತಿ ನೀಡಿದರು.
ಕಿನ್ನಿಮೂಲ್ಕಿಯಿಂದ ಅಂಬಲಪಾಡಿ ಸಂಪರ್ಕಿಸುವ ರಸ್ತೆಯು ತೀರಾ ಹಾಳಾಗಿರುವ ಕುರಿತು ಪತ್ರಿಕೆಗಳಲ್ಲಿ ವರದಿಯಾ ಗುತ್ತಿದ್ದು, ಈ ಸಂಬಂಧ ತುರ್ತಾಗಿ ತಾತ್ಕಾಲಿಕ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಅಭಿಯಂತರರಿಗೆ ಅವರು ಸೂಚಿಸಿದರು.
ಕೇರಳ ಮಾದರಿ: ಕೇರಳ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಕುಂದಾಪುರದಿಂದ ತಲಪಾಡಿಯವರೆಗೆ ಅಪಘಾತ ರಹಿತ ರಸ್ತೆ ನಿರ್ಮಾಣ ಮಾಡುವ ಚಿಂತನೆ ಇದೆ. ಕಟಪಾಡಿ ಅಂಡರ್‌ಪಾಸ್‌ನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಒಂದು ಬದಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನಾನುಕೂಲವಾಗಿದೆ ಎಂದ ಅವರು, ಇನ್ನೊಂದು ಬದಿಯ ಕಾಮಗಾರಿ ಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗ ದಿಂದ ರಸ್ತೆಯ ಎರಡೂ ಬದಿಗಳಲ್ಲಿ 75ಮೀ. ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಬಾರದೆಂಬ ಸೂಚನೆ ಇದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹು ದಾದ ಪರಿಹಾರ ಕ್ರಮಗಳನ್ನು ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಆಜ್ಮಿ, ಎನ್‌ಹೆಚ್‌ಎಐ ಕನ್ಸಲ್‌ಟೆಂಟ್ ಪ್ರೆಸಿಡೆಂಟ್ ಇಂಜಿನಿಯರ್ ಅಲೋಕ್ ಎಂ, ಎನ್‌ಹೆಚ್‌ಎಐ ಕನ್ಸಲ್‌ಟೆಂಟ್ ಟೀಮ್ ಲೀಡರ್ ಎನ್.ಆರ್ ಗೋಸ್ವಾಮಿ, ಧ್ರುವ್ ಕನ್ಸಲ್‌ಟೆನ್ಸಿಯ ಎ.ಹೆಚ್.ಇ. ವಿಘ್ನೇಶ್ ಹಾಗೂ ಇತರರು ಉಪಸ್ಥಿತರಿದ್ದರು.