ಅಮೆಝಾನ್ ಪ್ರಾಂಚಸಿ ಹೆಸರಿನಲ್ಲಿ 4.20 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಮಣಿಪಾಲ, ಆ.18: ಅಮೆಝಾನ್ ಕಂಪನಿಯ ಆನ್‌ಲೈನ್ ಹಬ್ ಪ್ರಾಂಚಸಿ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕೂರು ಗ್ರಾಮದ ರವಿಚಂದ್ರ(48) ಎಂಬವರಿಗೆ ಜೂ.29ರಂದು ಎಂ.ಸಾಯಿಕೃಷ್ಣ ಎಂಬಾತ ಕರೆ ಮಾಡಿ ಅಮೆಝಾನ್ ಕಂಪನಿಯ ಆನ್‌ಲೈನ್ ಹಬ್ ಪ್ರಾಂಚಸಿಯನ್ನು ಉಡುಪಿ ಮಣಿಪಾಲ ಅಲೆವೂರು ರಸ್ತೆಯಲ್ಲಿರುವ ಬಾಳಿಗಾ ಕಾಂಪ್ಲೆಕ್ಸ್‌ನಲ್ಲಿ ಮಾಡಿಸಿಕೊಡುವುದಾಗಿ ಹೇಳಿದ್ದನು. ಪ್ರಾರಂಭದಲ್ಲಿ ರಿಜಿಸ್ಟ್ರೇಶನ್ ಮಾತ್ರ ಆನ್‌ಲೈನ್‌ನಲ್ಲಿ ಮಾಡಿಕೊಳ್ಳಬೇಕು, ತಮ್ಮ ಕಂಪನಿಯ ಪೀಲ್ಡ್ ಆಫೀಸರ್ ಸ್ಥಳಕ್ಕೆ ಭೇಟಿ ನೀಡಿ ಕಂಪನಿಯೊಂದಿಗೆ ಒಪ್ಪಂದ ಮತ್ತು ಏರಿಯಾ ಪಿನ್ ಕೋಡ್ ಲಾಕಿಂಗ್ ಮಾಡಿಕೊಡುತ್ತಾರೆ ಎಂದು ತಿಳಿಸಿದ್ದನು.
ಅದರಂತೆ ಪೀಲ್ಡ್ ಆಫೀಸರ್ ಎಂದು ಹೇಳಿ ಎಂ.ಸಾಯಿಕೃಷ್ಣ, ಎಂ. ಗುರುಸ್ವಾಮಿ, ಸುರೇಶ್ ಕುಮಾರ್, ರಾಜ್ ಕುಮಾರ್ ಮತ್ತು ಮಹೇಶ್ ಸೇರಿ ಡೆಲಿವರಿ ಹಬ್ ಪ್ರಾಂಚಸಿಯನ್ನು ಉಡುಪಿ ಮಣಿಪಾಲದಲ್ಲಿ ಮಾಡಿ ಕೊಡುವುದಾಗಿ ಹೇಳಿ ರವಿಚಂದ್ರ ಅವರಿಂದ ಹಂತ ಹಂತವಾಗಿ 4,20,000 ರೂ. ಹಣವನ್ನು ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ.