ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ಕೋರಿ ಪತ್ರ: ಉಡುಪಿ ಡಿಸಿ ಸ್ವರೂಪ ಟಿ.ಕೆ. ಭರವಸೆ

Update: 2026-08-18 20:27 IST

ಉಡುಪಿ, ಆ.18: ರಾಷ್ಟ್ರೀಯ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರವು ಸಾಸ್ತಾನ ಮತ್ತು ಶಿರೂರುಗಳ ಟೋಲ್‌ಗಳಲ್ಲಿ ಸ್ಥಳೀಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ನೀಡುತ್ತಿರುವ ರಿಯಾಯಿತಿಯನ್ನು ಹೆಜಮಾಡಿ ಭಾಗದ ಟೋಲ್ ವ್ಯಾಪ್ತಿಯ ಸ್ಥಳೀಯರಿಗೂ ನೀಡುವಂತೆ ಕೋರಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗೆ ಶಿಫಾರಸ್ಸು ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭರವಸೆ ನೀಡಿದ್ದಾರೆ.

ಮಂಗಳವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಟೋಲ್ ಸುಂಕ ವಸೂಲಾ ತಿಗೆ ಸಂಬಂಧಿಸಿದಂತೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯ ಸಾಸ್ತಾನ ಹಾಗೂ ಶಿರೂರುಗಳಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರಗಲು ಸ್ಥಳೀಯ ವಾಹನಗಳಿಗೆ ಈ ಹಿಂದೆ ನೀಡುತ್ತಿರುವ ರಿಯಾಯಿತಿಯನ್ನು ಮುಂದುವರಿಸಿದ್ದು, ಹೆಜಮಾಡಿ ವ್ಯಾಪ್ತಿಯಲ್ಲಿ ಮಾತ್ರ ಈ ನಿಯಮ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಜಿಲ್ಲಾಧಿಕಾರಿ ನುಡಿದರು.

ಸಾಸ್ತಾನದಲ್ಲಿ 10 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡಲಾಗಿದೆ. ಈ ಮಾದರಿಯನ್ನೇ ಹೆಜಮಾಡಿ ಯಲ್ಲಿ ಅನುಸರಿಸಿದ್ದಲ್ಲಿ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂಬ ಬೇಡಿಕೆಯನ್ನು ಸ್ಥಳೀಯರು ಸಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದ ವತಿಯಿಂದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವಿನಾಯಿತಿ ನೀಡು ವಂತೆ ಮನವಿ ಸಲ್ಲಿಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್‌ವ್ಯಾಪ್ತಿಯಲ್ಲಿ ವಾಸವಿರುವ ಸ್ಥಳೀಯ ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ದಿನದಲ್ಲಿ ಹಲವು ಬಾರಿ ಟೋಲ್ ಮೂಲಕ ಹಾದುಹೋಗುವಾಗ ಪ್ರತಿ ಬಾರಿಯೂ ಶುಲ್ಕ ಪಾವತಿ ಮಾಡಲು ಅನಾನುಕೂಲತೆ ಉಂಟಾಗುತ್ತದೆ. ಟೋಲ್ ಪ್ಲಾಜಾ ಸುತ್ತಮುತ್ತಲಿನ ಸ್ಥಳೀಯ ವಾಹನಗಳಿಗೆ ಹಾಗೂ ನಿಗದಿತ ವ್ಯಾಪ್ತಿಯಲ್ಲಿ ಬರುವ ನೋಂದಾಯಿತ ವಾಹನಗಳಿಗೆ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್ ಸೌಲಭ್ಯ ಕಲ್ಪಿಸಿದಲ್ಲಿ ಅವರುಗಳಿಗೆ ಅನುಕೂಲ ವಾಗಲಿದೆ ಎಂಬ ಬೇಡಿಕೆ ಇದೆ ಎಂದರು.

ಸರ್ವಿಸ್ ರಸ್ತೆ ಕಾಮಗಾರಿ ತ್ವರಿತಗೊಳಿಸಿ: ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲವು ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಲು ಪ್ರಾಧಿಕಾರದಿಂದ ಅನುಮತಿ ದೊರಕಿದ್ದು, ಇವುಗಳ ಕಾಮಗಾರಿಗಳನ್ನು ಶೀಘ್ರ ದಲ್ಲಿಯೇ ಪ್ರಾರಂಭಿಸಿ, ಪೂರ್ಣಗೊಳಿಸಬೇಕು ಎಂದವರು ರಾ.ಹೆದ್ದಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರ್ವೀಸ್ ರಸ್ತೆ, ರಸ್ತೆ ರಿಪ್ಲೆಕ್ಟರ್‌ಗಳ ಅಳವಡಿಕೆ, ದಾರಿದೀಪ ಅಳವಡಿಕೆ, ರಸ್ತೆಯಲ್ಲಿರುವ ಹೊಂಡ-ಗುಂಡಿ ದುರಸ್ಥಿ, ಒಳಚರಂಡಿ ಕಾಮಗಾರಿ, ಜಂಕ್ಷನ್‌ಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ವಿವಿಧ ಸುರಕ್ಷತಾ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಬಹುದು. ಇದಕ್ಕೆ ಒತ್ತು ನೀಡಿ ಎಂದು ಸ್ವರೂಪ ಟಿ.ಕೆ. ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ದಾರರಿಗೆ ಸೂಚಿಸಿದರು.

ಸಾರ್ವಜನಿಕರ ಆಗ್ರಹ: ಸಭೆಯಲ್ಲಿ ಉಪಸ್ಥಿತರಿದ್ದ ಹೆಜಮಾಡಿ ಟೋಲ್ ಸಮೀಪದ ಸಾರ್ವಜನಿ ಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ದಿನದಲ್ಲಿ ಹಲವಾರು ಬಾರಿ ಟೋಲ್‌ನ್ನು ದಾಟಿ ಹೋಗುವುದು ಅನಿವಾರ್ಯವಾಗಿದ್ದು, ಪ್ರತೀ ಬಾರಿಯೂ ಶುಲ್ಕ ಪಾವತಿ ಮಾಡುವುದು ಕಷ್ಟಸಾಧ್ಯ. ಸಾಸ್ತಾನಕ್ಕೆ ನೀಡುವ ವಿನಾಯಿತಿಯನ್ನು ನಮಗೂ ನೀಡಬೇಕು ಎಂದು ಒತ್ತಾಯಿಸಿದರು.

ರಾ.ಹೆದ್ದಾರಿಯ ಕೆಲವೊಂದು ವ್ಯಾಪ್ತಿಯಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡಬೇಕು. ರಸ್ತೆ ದೀಪ ಅಳವಡಿಕೆ, ಟೋಲ್ ಸಿಬ್ಬಂದಿಗಳು ಸಾರ್ವಜನಿಕ ರೊಂದಿಗೆ ಸಹನೆಯಿಂದ ವರ್ತಿಸುವಂತೆ ಅವರು ಅಹವಾಲುಗಳನ್ನು ಸಲ್ಲಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್, ಅಭಿಯಂತರರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News