ಎಸ್‌ಐಆರ್ ಮೊದಲ ಹಂತದ ಪ್ರಕ್ರಿಯೆ ಮುಕ್ತಾಯ| ಉಡುಪಿ ಜಿಲ್ಲೆಯಲ್ಲಿ 10,00,545 ಮತದಾರರು ಡಿಜಿಟಲೈಸ್

ಹೆಸರು ಕೈಬಿಟ್ಟವರು 63,331 ಮಂದಿ

Update: 2026-08-18 21:54 IST

ಉಡುಪಿ, ಆ.18: ಜಿಲ್ಲೆಯಲ್ಲಿ ಜೂ.30ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಮೊದಲ ಹಂತ ಇದೀಗ ಪೂರ್ಣಗೊಂಡಿದ್ದು, ಜಿಲ್ಲೆಯ 2025ರ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿದ್ದ ಒಟ್ಟು 10,63,876 ಮತದಾರರ ಪೈಕಿ 10,00,545 ಮಂದಿಯ ಗಣತಿ ನಮೂನೆಯನ್ನು ಡಿಜಿಟಲೈಸ್ ಮಾಡಲಾಗಿದ್ದು, ಉಳಿದ 63,331 ಮಂದಿಯ ಹೆಸರುಗಳನ್ನು ವಿವಿಧ ಕಾರಣಗಳಿಗಾಗಿ ಆ.24ರಂದು ಪ್ರಕಟಗೊಳ್ಳುವ ಕರಡು ಮತದಾರರ ಪಟ್ಟಯಿಂದ ಕೈಬಿಡಲಾಗುವುದು.

ಬಿಎಲ್‌ಒಗಳು ಜಿಲ್ಲೆಯ ಮತದಾರರಿಗೆ ತಲುಪಿಸಿದ್ದ 10,63,876 ಎನ್ಯೂಮರೇಶನ್ ನಮೂನೆ (ಗಣತಿ ನಮೂನೆ) ಗಳನ್ನು ಮರಳಿ ಪಡೆದು ಅದನ್ನು ಶೇ.100ರಷ್ಟು ಡಿಜಟಲೀಕರಣಗೊಳಿಸುವಾಗ 10,00,545 ಮಂದಿಯ ನಮೂನೆ ಗಳು ಮಾತ್ರ ಡಿಜಿಟಲೈಸ್ ಮಾಡಲಾಗಿದೆ. ಇದು ಒಟ್ಟು ಮತದಾರರ ಶೇ.94.05 ಆಗಿದ್ದು, ರಾಜ್ಯದಲ್ಲೇ ನಂ.1 ಸ್ಥಾನದಲ್ಲಿ ಉಡುಪಿ ಜಿಲ್ಲೆ ವಿರಾಜಮಾನವಾಗಿದೆ. ಉಳಿದ 63,331 (ಶೇ.5.95) ನಮೂನೆಗಳು ವಿವಿಧ ಕಾರಣ ಗಳಿಂದ (ಎಎಸ್‌ಡಿಡಿಒ) ಪಟ್ಟಿಯಿಂದ ಅನರ್ಹಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ನೀಡಿದ ಅಂಕಿಅಂಶಗಳಿಂದ ಗೊತ್ತಾಗಿದೆ.

ಶೇ.100ರಷ್ಟು ಡಿಜಟಲೀಕರಣಗೊಳಿಸುವಾಗ 9,99,675 (ಶೇ. 93.97) ರಷ್ಟು ನಮೂನೆಗಳು ಮಾತ್ರ ಡಿಜಿಟಲೈಸ್ ಮಾಡಲಾಗಿತ್ತು. ಉಳಿದ 64,201 ನಮೂನೆಗಳು ವಿವಿಧ ಕಾರಣಗಳಿಂದ ಪಟ್ಟಿಯಿಂದ ಅನರ್ಹ ಗೊಂಡಿದ್ದವು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ವಿವಿದ ದಾಖಲೆ ಗಳೊಂದಿಗೆ ಅಧಿಕಾರಿಗಳನ್ನು ಬೇಟಿಯಾಗಿ ತಮ್ಮ ದಾಖಲೆಗಳನ್ನು ತೋರಿಸಿ ಮತ್ತೆ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುತಿದ್ದಾರೆ.

ಇದರಿಂದಾಗಿ ಆ.17ರಂದು ಎಸ್‌ಐಆರ್‌ನ ಮೊದಲ ಹಂತದ ಪ್ರಕ್ರಿಯೆ ಮುಗಿದಾಗ ಡಿಜಿಟಲೈಸ್ ಆದವರ ಸಂಖ್ಯೆ 10,00,545ಕ್ಕೆ ನೆಗೆದಿದ್ದರೆ, ಅನರ್ಹಗೊಂಡವರ ಸಂಖ್ಯೆ 63,331ಕ್ಕೆ ಇಳಿದಿತ್ತು. ಇದರಿಂದ 870 ಮಂದಿ ಮತ್ತೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲಿ ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,03,766 ಮಂದಿಯ ಹೆಸರು ಡಿಜಟಲೈಸ್ (ಶೇ.91.27) ಆಗಿದ್ದರೆ, 1,57,380 ಮಂದಿ (ಶೇ,8.73) ಮಂದಿಯ ಹೆಸರನ್ನು ಕೈಬಿಡಲಾಗಿದೆ. ಈ ಮೂಲಕ ಹಾವೇರಿ ಹಾಗೂ ಉತ್ತರ ಕನ್ನಡದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಎಎಸ್‌ಡಿಡಿಒದಲ್ಲಿ ಸದ್ಯ ಜಿಲ್ಲೆಯಲ್ಲಿ 21,262 ಮಂದಿ ಮೃತಪಟ್ಟಿದ್ದರೆ, 29,361 ಮಂದಿ ಶಾಶ್ವತವಾಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದಾರೆ. 4145 ಮಂದಿ ಗೈರಾಗಿದ್ದರೆ, 8,374 ಮಂದಿ ದ್ವಿಪ್ರತಿಯಲ್ಲಿ ಕಾರ್ಡ್ ಪಡೆದಿದ್ದರು. 189 ಮಂದಿ ಇತರರೂ ಈ ಅನರ್ಹಗೊಂಡ 63,331ರಲ್ಲಿ ಸೇರಿದ್ದಾರೆ ಎಂದು ರಾಜ್ಯ ಆಯೋಗ ಪ್ರಕಟಿಸಿದ ಮಾಹಿತಿ ಯಲ್ಲಿ ತಿಳಿಸಲಾಗಿದೆ.

ಕಾರ್ಕಳ ರಾಜ್ಯದಲ್ಲೇ ನಂ.1: ವಿಧಾನಸಭಾ ಕ್ಷೇತ್ರವಾರು ಸಾಧನೆಯನ್ನು ನೋಡುವಾಗ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಕಾಪು ವಿಧಾನಸಭಾ ಕ್ಷೇತ್ರಗಳು ರಾಜ್ಯದಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. ಉಳಿದಂತೆ ಕುಂದಾಪುರ 5ನೇ, ಬೈಂದೂರು 7ನೇ ಹಾಗೂ ಉಡುಪಿ ಕ್ಷೇತ್ರ 29ನೇ ಸ್ಥಾನದಲ್ಲಿವೆ.

ಕಾರ್ಕಳದಲ್ಲಿ ಅತೀ ಹೆಚ್ಚು ಮಂದಿ ಮತದಾರರು - ಒಟ್ಟು 1,93,142 ಮತದಾರರ ಪೈಕಿ 1,83,485 (ಶೇ.95) ಡಿಜಿಟಲೈಸ್ ಆದರೆ, ಕೇವಲ 9,657 ಮಂದಿಯ (ಶೇ.5) ಹೆಸರು ಮಾತ್ರ ಮತದಾರರ ಪಟ್ಟಿಯಿಂದ ತೆಗೆಯಲ್ಪ ಟ್ಟಿದೆ. ಕಾಪು ಕ್ಷೇತ್ರದಲ್ಲಿ 1, 94,718 ಮತದಾರರ ಪೈಕಿ 1,84,684 (ಶೇ.94.85) ಮಂದಿ ಹೆಸರು ಡಿಜಿಟಲೈಸ್ ಆಗಿದ್ದರೆ, 10,034 (ಶೇ.5.15) ಮಾತ್ರ ಪಟ್ಟಿಯಿಂದ ನಾಪತ್ತೆಯಾಗಿದ್ದಾರೆ.

ಕುಂದಾಪುರ ಕ್ಷೇತ್ರದಲ್ಲಿ ಒಟ್ಟು 2,12,473 ಮತದಾರರ ಪೈಕಿ 2,00,839 (ಶೇ.94.52) ಮಂದಿ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ, 11,634 (ಶೇ.5.48) ಮಂದಿಯ ಹೆಸರು ಕೈಬಿಡಲಾಗಿದೆ. ಬೈಂದೂರಿನಲ್ಲಿ ಕ್ಷೇತ್ರದಲ್ಲಿ 2,41,863 ಮತದಾರರ ಪೈಕಿ 2,27,583 (94.10) ಮಂದಿ ಪಟ್ಟಿಯಲ್ಲಿ ಉಳಿದುಕೊಂಡಿದ್ದರೆ, 14,280 (ಶೇ.5.90) ಹೆಸರನ್ನು ಕೈಬಿಡಲಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,680 ಮತದಾರರ ಪೈಕಿ 2,03,954 (ಶೇ.92) ಮಂದಿ ಹೆಸರು ಪಟ್ಟಿಯಲ್ಲಿದ್ದರೆ, 17,726 (ಶೇ.8) ಮಂದಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ರಾಜ್ಯ ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿಯನ್ನು ಆ.24ರಂದು ಪ್ರಕಟಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News