ಉಡುಪಿ, ಆ.24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಸೊಳ್ಳೆ ದಿನಾಚರಣೆ’’ ಕಾರ್ಯಕ್ರಮವನ್ನು ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, 1897ನೇ ಆಗಸ್ಟ್ 20ರಂದು ಭಾರತೀಯ ಸಂಜಾತ ಬ್ರಿಟಿಷ್ ವೈದ್ಯ ವಿಜ್ಞಾನಿ ಸರ್ ರೋನಾಲ್ಡ್ ರೋಸ್ ಇವರು ಸೊಳ್ಳೆಗಳಿಂದ ಮನುಷ್ಯನಿಗೆ ಮಲೇರಿಯಾ ಹರಡುತ್ತದೆ ಎಂದು ಜಗತ್ತಿಗೆ ಹೇಳಿದ ದಿನವಾಗಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಹೆಚ್.ನಾಯ್ಕರ್ ಮಾತನಾಡಿ, ಅನಾಫಿಲಿಸ್, ಕ್ಯುಲೆಕ್ಸ್, ಈಡೀಸ್ ಈಜಿಪ್ಟ್ ಈ ಮೂರು ಜಾತಿಯ ಸೊಳ್ಳೆಗಳು ಮಲೇರಿಯಾ, ಡೆಂಗಿ, ಆನೆಕಾಲು, ಚಿಕ್ಕುನ್‌ಗುನ್ಯಾ, ಮೆದುಳುಜ್ವರ ಸೇರಿದಂತೆ ವಿವಿಧ ಕಾಯಿಲೆಗಳನ್ನು ಹರಡುತ್ತವೆ. ರೋಗಗಳ ನಿರ್ಮೂಲನೆಗೆ ಸೊಳ್ಳೆಗಳ ನಿಯಂತ್ರಣವೊಂದೇ ದಾರಿಯಾಗಿದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಎಂದು ಹೇಳಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಟ ಪಟೇಗಾರ್ ಮಾತನಾಡಿ, ಯಾವುದೇ ಜ್ವರ ಬಂದಾಗ ತತ್‌ಕ್ಷಣವೇ ಆರೋಗ್ಯ ಕೇಂದ್ರಗಳಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸುವುದರೊಂದಿಗೆ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನೀರು ಶೇಖರಣ ತೊಟ್ಟಿಗಳನ್ನು ವಾರಕೊಮ್ಮೆ ಶುಚಿಗೊಳಿಸಿ ಭದ್ರ ಮುಚ್ಚಳವನ್ನು ಮುಚ್ಚಿಡಬೇಕು. ಸಂಜೆ ವೇಳೆ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು ಎಂದ ಅವರು, ಸ್ವಯಂರಕ್ಷಣಾ ವಿಧಾನ, ರಾಸಾಯನಿಕ ವಿಧಾನ, ಜೈವಿಕ ವಿಧಾನದ ಬಗ್ಗೆ ಮುಂಜಾಗೃತಾ ಕ್ರಮವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮೇಲ್ವಿಚಾರಣಾಧಿಕಾರಿ ಪಿ.ಎಂ. ಇಟಗಿ, ಪ್ರಾಧ್ಯಾಪಕರಾದ ಅನುಪಮಾ ಐ, ಡಾ.ರಂಜನಾ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor