ಬೈಂದೂರು ರೈಲ್ವೇ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಯತ್ನ: ಬಿ.ವೈ.ರಾಘವೇಂದ್ರ
ಬೈಂದೂರು, ಆ.24: ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೇ ನಿಲ್ದಾಣದ ಸಮಗ್ರ ಅಭಿವೃದ್ಧಿ ಹಾಗೂ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತರ ಅನುಕೂಲಕ್ಕಾಗಿ ಕೈಗೊಂಡಿರುವ ಪ್ರಮುಖ ಕಾರ್ಯಗಳನ್ನು ಅವಲೋಕಿಸುವ ಕುರಿತು ಸೋಮವಾರ ಸಂಸದ ಬಿ.ವೈ.ರಾಘವೇಂದ್ರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಹಿಂದೆ ಕೇವಲ ಹಾಲ್ಟ್ ಸ್ಟೇಷನ್ ಆಗಿದ್ದ ಬೈಂದೂರು ರೈಲ್ವೇ ನಿಲ್ದಾಣವನ್ನು 2.64 ಕೋಟಿ ವೆಚ್ಚದಲ್ಲಿ ನೂತನ ನಿಲ್ದಾಣ, ಗಣಕೀಕೃತ ಟಿಕೆಟ್ ಕಾದಿರಿಸುವಿಕೆ ಮತ್ತು ಪ್ಲಾಟ್‌ಫಾರ್ಮ್ ವಿಸ್ತರಣೆಯೊಂದಿಗೆ ಮೇಲ್ದರ್ಜೆ ಗೇರಿಸಲಾಗಿದೆ. ಇಂದು 50ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ಯಾಗುತ್ತಿದ್ದು, ನೂರಾರು ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಉದ್ಯೋಗಾವಕಾಶ ದೊರೆತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಕೊಲ್ಲೂರು ದೇವಸ್ಥಾನದಿಂದ ಕೇವಲ 27 ಕಿ.ಮೀ. ದೂರದಲ್ಲಿರುವ ಈ ನಿಲ್ದಾಣಕ್ಕೆ ರಾ.ಹೆ-766ಸಿ ಮೂಲಕ ನೇರ ರಸ್ತೆ ಸಂಪರ್ಕವಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಗೋವಾದಿಂದ ಬರುವ ಭಕ್ತರ ಹಿತದೃಷ್ಟಿಯಿಂದ ಇದನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಅಧಿಕೃತ ರೈಲು ನಿಲ್ದಾಣವಾಗಿ ಗುರುತಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು.
ಉಡುಪಿ ಜಿಲ್ಲಾ ಕೇಂದ್ರದ ನಂತರ ಅತಿ ಹೆಚ್ಚು ಆದಾಯ ತರುವ ನಿಲ್ದಾಣವಾದ ಬೈಂದೂರನ್ನು ಸುಧಾರಿತ ನಿಲ್ದಾಣವನ್ನಾಗಿ ರೂಪಿಸಲು 86.00 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಹೆಚ್ಚುವರಿ ನಿಲುಗಡೆಗಳು: ಮುಂಬರುವ ದಿನಗಳಲ್ಲಿ ಎಲ್ಲಾ ರಾಜ್ಯದ ಪ್ರಮುಖ ರೈಲುಗಳ ನಿಲುಗಡೆಗೆ ಪ್ರಯತ್ನ ಮುಂದುವರಿದಿದ್ದು, ಬಿಜೂರು ಹಾಗೂ ಸೇನಾಪುರ ರೈಲು ನಿಲ್ದಾಣಗಳಲ್ಲೂ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಮನವಿ ಮಾಡಲಾಗಿದೆ. ಈ ಸಂಪರ್ಕ ವಿಸ್ತರಣೆಯಿಂದ ಮರವಂತೆ ಕಡಲತೀರ ಹಾಗೂ ಒತ್ತಿನೆಣೆ ಸೂರ್ಯಾಸ್ತ ತಾಣ ಸೇರಿದಂತೆ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಸಂಸದರು ತಿಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಉದ್ಯಮಿ ವೆಂಕಟೇಶ ಕಿಣಿ, ಜಯಾನಂದ ಹೋಬಳಿದಾರ್, ಮಾಜಿ ಜಿ.ಪಂ ಸದಸ್ಯ ಸುರೇಶ ಬಟವಾಡಿ, ಪ್ರಮುಖರಾದ ಅನಿತಾ, ಪ್ರಿಯದರ್ಶಿನಿ ದೇವಾಡಿಗ, ಶರತ್ ಶೆಟ್ಟಿ ಉಪ್ಪುಂದ, ಮಹೇಂದ್ರ ಪೂಜಾರಿ, ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ ವಸ್ರೆ, ಜಯಾನಂದ ಹೋಬಳಿರ್ದಾ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.