ಉಡುಪಿ, ಆ.24: ಮನೆಯ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾ ಏಕಾಏಕಿ ಹೊತ್ತಿ ಉರಿದು, ಪಕ್ಕದಲ್ಲಿದ್ದ ಕಾರು ಹಾಗೂ ಸ್ಕೂಟರ್‌ಗೂ ಬೆಂಕಿ ವ್ಯಾಪಿಸಿದ ಘಟನೆ ರವಿವಾರ ಬೆಳಗ್ಗೆ ಪೆರಂಪಳ್ಳಿ ಸಮೀಪ ನಡೆದಿದೆ.

ಮನೆಯೊಂದರ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡಿದ್ದು, ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಕಾರು ಹಾಗೂ ಸ್ಕೂಟರ್‌ಗೂ ಬೆಂಕಿ ವ್ಯಾಪಿಸತೊಡಗಿದೆ. ಈ ವೇಳೆ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಮನೆಯ ಯಜಮಾನರು ಪರಿಸ್ಥಿತಿಯನ್ನು ಕಂಡು ಆತಂಕಗೊಂಡು ಸಹಾಯಕ್ಕಾಗಿ ಅಂಗಲಾಚಿದರು. ಮನೆಯಲ್ಲಿದ್ದವರ ಸುರಕ್ಷತೆಯ ಜೊತೆಗೆ, ವಾಹನಗಳಿಂದ ಬೆಂಕಿ ಮತ್ತಷ್ಟು ವ್ಯಾಪಿಸುವ ಸಾಧ್ಯತೆಯೂ ಎದುರಾಗಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಹೊತ್ತಿ ಉರಿಯುತ್ತಿದ್ದ ಬೆಂಕಿಯ ನಡುವೆಯೇ ಕಾರನ್ನು ಸುರಕ್ಷಿತವಾಗಿ ಹೊರತೆಗೆದು ಹೆಚ್ಚಿನ ಹಾನಿ ಯಾಗುವುದನ್ನು ತಪ್ಪಿಸಿದರು. ಇದರ ಜೊತೆಗೆ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸಿಬ್ಬಂದಿ ಯನ್ನು ಸ್ಥಳಕ್ಕೆ ಕರೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor