ಉಡುಪಿ, ಸೆ.4: ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಬದಲಾವಣೆಯನ್ನು ಸ್ವೀಕರಿಸಿ, ನಿರಂತರವಾಗಿ ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅರ್ಥಶಾಸ್ತ್ರಜ್ಞ, ಶೈಕ್ಷಣಿಕ ಸಂಶೋಧಕ ಹಾಗೂ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ಪ್ರೊ.ಎನ್.ಎಸ್.ಶೆಟ್ಟಿ ಹೇಳಿದ್ದಾರೆ.

ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಲಾದ ‘ಓರಿಯೆಂಟೇಶನ್’ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.

ಬೇಟೆ ಮತ್ತು ಆಹಾರ ಸಂಗ್ರಹಣೆಯಿಂದ ಕೃಷಿಯತ್ತ ಸಾಗಲು ಮಾನವಕುಲಕ್ಕೆ ಕೋಟ್ಯಂತರ ವರ್ಷಗಳು ಬೇಕಾ ದವು. ಕೈಗಾರಿಕೀಕರಣಕ್ಕೆ ಸುಮಾರು 1,000 ವರ್ಷಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗಕ್ಕೆ ಸುಮಾರು 100 ವರ್ಷಗಳು ಹಾಗೂ ವಿವಿಧ ಚಟುವಟಿಕೆಗಳ ಡಿಜಿಟಲೀಕರಣಕ್ಕೆ ಸುಮಾರು 50 ವರ್ಷಗಳು ಬೇಕಾ ದವು. ಆದರೆ ಇಂದು ಜಗತ್ತು ಹಿಂದೆಂದೂ ಕಾಣದ ವೇಗದಲ್ಲಿ ಬದಲಾಗುತ್ತಿದೆ ಎಂದರು.

ಬದಲಾವಣೆಯನ್ನು ಸ್ವೀಕರಿಸಿ, ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನದೊಂದಿಗೆ ಸಿದ್ಧರಾಗಬೇಕು. ಉತ್ಕೃಷ್ಟತೆಗಾಗಿ ಪ್ರಯತ್ನಿಸುವುದು ಈಗ ಬದುಕುಳಿಯುವ ತಂತ್ರವಾಗಿದೆ. ವಿದ್ಯಾರ್ಥಿಗಳು ವಿಶ್ಲೇಷಣಾ ಕೌಶಲ ಮತ್ತು ಬದಲಾವಣೆ ಯನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕಲಿಯುವುದು, ಕಲಿತದ್ದನ್ನು ಮರುಪರಿಶೀಲಿಸುವುದು ಹಾಗೂ ಹೊಸದನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದನ್ನೇ ಸಂಪೂರ್ಣವಾಗಿ ಅವಲಂಬಿಸಬಾರದು. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ವಿವೇಕದಿಂದ ಬಳಸಬೇಕು ಎಂದು ಹೇಳಿದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಕೆ., ಸಹಾಯಕ ಪ್ರಾಧ್ಯಾಪಕರಾದ ಡಾ.ಅಬ್ದುಲ್ ರಝಾಕ್, ಪುನೀತ್ ತೆಂಡೂಲ್ಕರ್ ಹಾಗೂ ಆಶಾ ಉಪಸ್ಥಿತರಿದ್ದರು. ವಿಜಿತಾ ಸ್ವಾಗತಿಸಿದರು. ಪೂಜಾ ಅತಿಥಿಯನ್ನು ಪರಿಚಯಿಸಿದರು. ರುತು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor