ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ
ಉಡುಪಿ, ಸೆ.6: ಉಡುಪಿ ಆದರ್ಶ ಚಾರಿಟೇಬಲ್ ಟ್ರಸ್ಟ್, ಆದರ್ಶ ಸಮೂಹ ಸಂಸ್ಥೆಗಳು, ಆದರ್ಶ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮಜಯಂತಿ ಹಾಗೂ ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರವಿವಾರ ಅಲೆವೂರು ಕೆಮ್ತೂರು ರಸ್ತೆಯ ಆದರ್ಶ ಸಮೂಹ ವಿದ್ಯಾಸಂಸ್ಥೆಗಳ ಸಂಕೀರ್ಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಉಡುಪಿ ಜಿಲ್ಲೆ ಎಸ್‌ಎಸ್‌ಎಲ್ಸಿ, ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆಗೈದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಕಲಿಕೆ, ಆರೋಗ್ಯಕ್ಕೆ ಪೂರಕ ವಾತಾವರಣ ಬಳಸಿಕೊಂಡು ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಸಾಧನೆ ಮಾಡಬೇಕು ಎಂದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸು ವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾಧಕರ ಸಾಧನೆಯ ಹಿಂದೆಯೂ ಶಿಕ್ಷಕರ ಪರಿಶ್ರಮವಿದೆ ಎಂದು ತಿಳಿಸಿದರು.
ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಆದರ್ಶ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಜಿ.ಎಸ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಸ್ಥೂಲಕಾಯ ದೇಹದಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಶೇ.14ರಷ್ಟು ಮಧುಮೇಹ, ಶೇ.8ರಷ್ಟು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾಗಿರುವ ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ ಹೃದ್ರೋಗ, ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಯೂ ಎಳೆಯ ಪ್ರಾಯದಲ್ಲೇ ಕಾಡುತ್ತಿದೆ. ಸಮಾಜದ ಪ್ರತಿಯೊಬ್ಬರು ಆದರ್ಶ ದೇಹತೂಕ, ಹಿತ-ಮಿತ ಆಹಾರ ಸೇವನೆ ಯನ್ನು ರೂಢಿಸಿಕೊಳ್ಳಬೇಕು. ಆರೋಗ್ಯ ಮತ್ತು ಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.
ಉಡುಪಿ ಜಿಲ್ಲೆಯ 5 ವಲಯಗಳ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ, ಸಿಬಿಎಸ್ಸಿ ಹಾಗೂ ಕಾಲೇಜು ವಿಭಾಗದ ಒಟ್ಟು 40 ಮಂದಿ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಕಾರಿ ಅಬೀದ್ ಗದ್ಯಾಳ್, ಶಾಲಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ., ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹ ಣಾಕಾರಿ ವಿಮಲಾ ಚಂದ್ರಶೇಖರ್, ಆದರ್ಶ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಆ್ಯಂಡ್ ಪ್ಯಾರಾಮೆಡಿಕಲ್ ಸೈನ್ಸ್ ಪ್ರಿನ್ಸಿಪಾಲ್ ಡಾ.ಎನ್.ಟಿ. ವೇಣುಗೋಪಾಲ್, ಕಾಲೇಜ್ ಆಫ್ ನರ್ಸಿಂಗ್‌ನ ಪ್ರಿನ್ಸಿಪಾಲ್ ಪ್ರೊ.ಸುದೀನಾ ಎಂ. ಉಪಸ್ಥಿತರಿದ್ದರು.
ಆದರ್ಶ ಆಸ್ಪತ್ರೆಯ ಅನುಶ್ರೀ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.