ಕುಂದಾಪುರ, ಸೆ.6: ಈಗಲೇ ಜನಸಾಮಾನ್ಯರಿಗೆ ನ್ಯಾಯದಾನ ಪ್ರಕ್ರಿಯೆ ವಿಳಂಬ ಆಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ, ಜನರಿಗೆ ತ್ವರಿತಗತಿಯಲ್ಲಿ ನ್ಯಾಯ ಸಿಗಬೇಕಾದರೆ ಕರಾವಳಿಯಲ್ಲಿ ಖಂಡಿತವಾಗಿಯೂ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕು. ಈ ಬಗ್ಗೆ ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕುಂದಾಪುರದ ವಕೀಲರ ಸಂಘದ ನೇತೃತ್ವದಲ್ಲಿ ಕಲಾಕ್ಷೇತ್ರ ಕುಂದಾಪುರ, ರೋಟರಿ, ಲಯನ್ಸ್, ಜೇಸಿ ಸಂಸ್ಥೆಗಳು ಹಾಗೂ ಕುಂದಾಪುರದ ವಿವಿಧ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಆರಂಭಿಸುವಂತೆ ಆಗ್ರಹಿಸಿ ಕುಂದಾಪುರ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಜನಾಗ್ರಹ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ನ್ಯಾಯ ಎಲ್ಲರಿಗೂ ತ್ವರಿತವಾಗಿ ಸಿಗಬೇಕು ಎಂಬ ಉದ್ದೇಶ ಎಲ್ಲರದ್ದಾಗಿದೆ. ಹೈಕೋರ್ಟ್ ಪೀಠ ಬಂದರೆ ನ್ಯಾಯದಾನದ ಪ್ರಕ್ರಿಯೆಗೆ ಇನ್ನಷ್ಟು ವೇಗ ಸಿಗುತ್ತದೆ. ನ್ಯಾಯದ ವಿಲೇವಾರಿ ವ್ಯವಸ್ಥೆಯೂ ಜಾಸ್ತಿ ಆಗುತ್ತದೆ ಎಂದರು.

ಕರಾವಳಿ ಹೈಕೋರ್ಟ್ ಪೀಠದ ಹೋರಾಟ ಸಮಿತಿ ಸಂಚಾಲಕ ಪ್ರೇಮ್ ಕುಮಾರ್ ಶೆಟ್ಟಿ ಮಾತನಾಡಿ, ಕರಾವಳಿ ಭಾಗದವರಿಗೆ ಕಡಿಮೆ ವೆಚ್ಚದಲ್ಲಿ ತ್ವರಿತಗವಾಗಿ ನ್ಯಾಯ ಸಿಗಬೇಕಾದರೆ ಹೈಕೋರ್ಟ್ ಪೀಠ ಆಗಬೇಕು. ಈ ಬಗ್ಗೆ ಮಂಗಳೂರಿನಲ್ಲಿ ನಡೆಯುವ ಸಂಪುಟ ಸಭೆಯಲ್ಲಿಯೂ ನಿರ್ಣಯ ಆಗಲಿ ಎಂದು ಒತ್ತಾಯಿಸಿದರು.

ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ವಕೀಲರ ಸಂಘದ ರಾಜ್ಯ ಸಮಿತಿ ಸದಸ್ಯೆ ಶ್ಯಾಮಲಾ ಭಂಡಾರಿ, ಕಲಾಕ್ಷೇತ್ರದ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ, ಲಯನ್ಸ್ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಕಸಾಪ ತಾಲೂಕು ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ವಕೀಲ ಟಿ.ಬಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ಜೆ.ರಾವ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಚಂದ್ರ ಶೆಟ್ಟಿ ವಂದಿಸಿದರು. ವಕೀಲ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor