ಕೋಟ: ವಿಶ್ವದ ನಾನಾ ಕಡೆಗಳಲ್ಲಿ ಪ್ರಾಕೃತಿಕ ವಿಕೋಪಗಳು ನಡೆಯುತ್ತಿದ್ದು ಅಂತಹ ಸನ್ನಿವೇಶ ಕೆಲ ವರ್ಷಗಳಲ್ಲಿ ನಮ್ಮಲ್ಲು ಎದುರಾಗಬಹುದು. ಈ ಬಗ್ಗೆ ಈಗಲೇ ಜಾಗೃತಿರಾಗಬೇಕು ಎಂದು ಚಿತ್ರನಟ ಪುನಿತ್ ಶೆಟ್ಟಿ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವ ದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪೇತ್ರಿ ಅನ್ನಪೂರ್ಣ ನರ್ಸರಿ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕೋಟದ ಕಾಸನಗುಂದು ಪರಿಸರದಲ್ಲಿ ರವಿವಾರ ಆಯೋಜಿಸಲಾದ 316ನೇ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಪ್ರಕೃತಿಯ ವಿರುದ್ಧ ಮನುಕುಲ ಆಧುನಿಕತೆಯ ನೆಪದಲ್ಲಿ ಹಾಳು ಕೆಡವುತ್ತಿದ್ದೇವೆ. ಇದರ ಪರಿಣಾಮ ಸಾಕಷ್ಟು ತಾಪಮಾನ, ವಾತಾವರಣ ವ್ಯತ್ಯಯ ಉಂಟಾಗುತ್ತಿದೆ. ಈ ರೀತಿಯ ಸನ್ನಿವೇಶಗಳು ಮನುಕುಲದ ನಿದ್ದೆಗೆಡಿಸಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಕೋಟ ಪಂಚಾಯತ್ ಮಾಜಿ ಸದಸ್ಯ, ಹಿರಿಯ ಕೃಷಿಕ ಸುಧಾಕರ್ ಶೆಟ್ಟಿ ಮಕ್ಕಳಿಗೆ ಗಿಡ ಹಸ್ತಾಂತರಿಸಿ ಪರಿಸರ ಜಾಗೃತಿ ಮೂಡಿಸಿದರು. ಕಾಸನಗುಂದು ಯುವಕ ಮಂಡಲದ ಅಧ್ಯಕ್ಷ ಸತೀಶ್ ಮಡಿವಾಳ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಉಪಸ್ಥಿತರಿದ್ದರು.

ಪ್ರಭಾಕರ್ ಬಿಎಸ್‌ಎನ್‌ಎಲ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor