‘ಕಾಳಾವರ ಕೆಸರ್ ಗೆದ್ದೆಂಗ್ ಒಂದ್ ದಿನ’ ಕಾರ್ಯಕ್ರಮ
ಕುಂದಾಪುರ, ಸೆ.6: ಆಧುನಿಕತೆ, ಪಾಶ್ಚಿಮಾತ್ಯ ಅನುಕರಣೆಗೆ ಮಾರು ಹೋಗಿ ನಮ್ಮ ಮೂಲ ಸಂಪ್ರದಾಯ, ಸಂಸ್ಕೃತಿಯನ್ನು ಮರೆಯುವ ಕಾಲ ಘಟ್ಟದಲ್ಲಿ ಕರಾವಳಿಯ ಆಚರಣೆ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಆಯೋಜಿ ಸುವ ಮೂಲಕ ಪರಂಪರೆಯನ್ನು ಉಳಿಸಬೇಕು. ಹಳ್ಳಿಗಳು ಬೆನ್ನೆಲುಬಾಗಿರುವ ನಮ್ಮ ದೇಶದಲ್ಲಿ ಗ್ರಾಮೀಣ ಸೊಗಡಿಗೆ ಆದ್ಯತೆ ನೀಡಬೇಕು. ಪೂರ್ವಜರು ಹಾಕಿಕೊಟ್ಟ ಪರಿಸರ ಸಂರಕ್ಷಣೆಯ ಮೂಲಮಂತ್ರವನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದು ಕುಂದಾಪುರ ಸಂಚಾರ ಠಾಣೆ ಪಿಎಸ್‌ಐ ಅನೂಪ್ ನಾಯಕ್ ಹೇಳಿದ್ದಾರೆ.
ಕಾಳಾವರ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಶ್ರೀ ಮಹಾ ಲಿಂಗೇಶ್ವರ ಮತ್ತು ಶ್ರೀಕಾಳಿಂಗ ದೇವಸ್ಥಾನದ ಆಶ್ರಯದಲ್ಲಿ 18ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಕಾಳಾವರದ ಬಂಡ್ಸಾಲಿ ಗದ್ದೆಯಲ್ಲಿ ರವಿವಾರ ನಡೆದ ’ಕಾಳಾವರ ಕೆರ್ಸ ಗೆದ್ದೆಂಗ್ ಒಂದ್ ದಿನ...ಚೌತಿಗೆ ಒಂದಿನ ಗೆದ್ದೆಂಗೆ ಸೊಕ್ಕುವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಗುತ್ತಿಗೆದಾರ ಕಮಲ್ ಕಿಶೋರ್ ಹೆಗ್ಡೆ ಮೊಳಹಳ್ಳಿ ಉದ್ಘಾಟಿಸಿ ಶುಭಹಾರೈಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗರಾಜ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಕೋಣಗಳ ಓಟದ ಮೂಲಕ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಸಾಹಿತಿ ಹರಿದಾಸ್ ಕಾಳಾವರ್ಕರ್, ನಾಟಿ ವೈದ್ಯ ಸಿದ್ದಯ್ಯ ಶೆಟ್ಟಿ ಕಟ್ಕೆರೆ, ಶಿಕ್ಷಕ ಗಣೇಶ್ ಶೆಟ್ಟಿಗಾರ್, ಕೃಷಿಕ ವಾಣಿ ಶೆಟ್ಟಿ ಕಾಳಾವರ, ಶೈಕ್ಷಣಿಕ ಸಾಧನೆಗೈದ ಸಾನಿಕಾ ದೇವಾಡಿಗ, ಸಮೀಕ್ಷಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಳಾವರ ಗ್ರಾಪಂ ಮಾಜಿ ಸದಸ್ಯ ಜಯಪ್ರಕಾಶ್ ಶೆಟ್ಟಿ, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ರತ್ನಾಕರ ಶೆಟ್ಟಿ ಕಾಳಾವರ ನಾಯಕರಮನೆ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಾಮ ಮೊಗವೀರ ಕಾಳಾವರ, ಯುವಶಕ್ತಿ ಮಿತ್ರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ, ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ, ವಕೀಲ ಪ್ರದೀಪ್ ಕುಮಾರ್ ಶೆಟ್ಟಿ ಕಾಳಾವರ, ಕರಾವಳಿ ಮಿತ್ರ ಸಂಪಾದಕ ರಾಘವೇಂದ್ರ, ಪ್ರಮುಖರಾದ ದಿವಾಕರ ಶೆಟ್ಟಿ ಮೊದಲಾದವರಿದ್ದರು.
ಸಮಿತಿ ಉಪಾಧ್ಯಕ್ಷ ರಕ್ಷಿತ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಸುಧೀರ್ ಕುಮಾರ್ ಜಿ. ಕಾರ್ಯಕ್ರಮ ಸಂಯೋಜಿಸಿದರು. ಗಣೇಶ್ ಶೇಡಿಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.