ಉಡುಪಿ, ಸೆ.10: ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಆದಿವಾಸಿ ಮಲೆಕುಡಿಯರ ಮೂಲಸೌಕಾರ್ಯಗಳಿಗೆ ಒತ್ತು ನೀಡಬೇಕು ಎಂದು ಕರ್ನಾಟಕ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಆಗ್ರಹಿಸಿದ್ದಾರೆ.

ಮಲೆಕುಡಿಯರು ಹಲವು ವರ್ಷಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹಾಗೂ ಇತರ ಅರಣ್ಯ ಪ್ರದೇಶಗಳಲ್ಲಿ ತಲತಲಾಂತರಗಳಿಂದ ಯಾವುದೇ ಮೂಲ ಸೌಕರ್ಯಗಳು ಸರಿಯಾಗಿಲ್ಲದೆ ಅತ್ಯಂತ ಸಂಕಷ್ಟದ ಜೀವನವನ್ನು ಸಮುದಾಯ ನಡೆಸುತ್ತಾ ಬರುತ್ತಿದೆ. ಈ ಬಾರಿ ಮಂಗಳೂರಿನಲ್ಲಿ ಆಯೋಜಿಸಲಾದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಯ ಜೊತೆಗೆ, ಇಲ್ಲಿನ ಅರಣ್ಯವಾಸಿಗಳ, ಆರೋಗ್ಯ ಉದ್ಯೋಗ, ಶಿಕ್ಷಣ, ಮನೆ, ವಸತಿ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಬುಡಕಟ್ಟು ಸಮುದಾಯ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳ ಆಶಾದಾಯಕ ಅರಣ್ಯ ಹಕ್ಕು ಕಾಯ್ದೆ, ಸಮರ್ಪಕ ಜಾರಿಯಾಗುವುದರ ಮುಖಾಂತರ, ಕಾಯ್ದೆಯ ಸೆಕ್ಷನ್ 3(2) ಅವಕಾಶದಡಿ ಜಿಲ್ಲಾ ಹಂತದಲ್ಲೇ ರಸ್ತೆ, ವಿದ್ಯುತ್ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ತುರ್ತಾಗಿ ಅವಕಾಶ ಕೊಡಬೇಕಾಗಿದೆ. ರಾಜ್ಯದ ಅರಣ್ಯಾಧಾರಿತ 13 ಬಡಕಟ್ಟು ಸಮುದಾಯ ದವರಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರವನ್ನು ಕಳೆದ ಏಳು ತಿಂಗಳಿನಿಂದ ಸರಕಾರ ನೀಡುತ್ತಿಲ್ಲ. ಇದನ್ನು ಕೂಡಲೇ ವಿತರಣೆ ಮಾಡಬೇಕು. ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಸಾಧಕ ಭಾಗದ, ಬಗ್ಗೆ ವಿಸ್ತೃತ ಚರ್ಚೆಯೊಂದಿಗೆ ಭೌತಿಕ ಸಮೀಕ್ಷೆ ನಡೆಸಿ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor