ಉಡುಪಿ, ಸೆ.10: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ(ಕಭೀ) ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೌತಚಿಕಿತ್ಸೆಯ ದಿನಾಚರಣೆಯನ್ನು ಸೆ.9ರಂದು ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಭೀ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಲತಾ ನಾಯಕ್, ಪಾರ್ಶ್ವವಾಯು ತಡೆಗಟ್ಟುವಿಕೆ, ಆರಂಭಿಕ ರೋಗನಿರ್ಣಯ ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವದ ಕುರಿತು ಮಾತನಾಡಿದರು. ಅಲ್ಲದೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಭೌತಚಿಕಿತ್ಸಕರ ಪಾತ್ರವನ್ನು ಶ್ಲಾಘಿಸಿದರು.

ನಂತರ ಕಭೀ ಕಾರ್ಯಕ್ರಮದ ಕುರಿತು ಹಾಗೂ ಪಾರ್ಶ್ವವಾಯು (ಸ್ಟ್ರೋಕ್) ತಡೆಗಟ್ಟುವಿಕೆ ಮತ್ತು ಹೃದಯರಕ್ತನಾಳದ ಆರೋಗ್ಯದ ಕುರಿತು ಸಾರ್ವಜನಿಕ ಜಾಗೃತಿ ಅಧಿವೇಶನ ನಡೆಯಿತು. ಜಿಲ್ಲಾಸ್ಪತ್ರೆಯಲ್ಲಿನ ಬ್ರೈನ್ ಹೆಲ್ತ್ ಕ್ಲಿನಿಕ್ ಸಿಬ್ಬಂದಿ ಹಾಗೂ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ಯನ್ನು ಜಿಲ್ಲಾ ಸಂಯೋಜಕಿ ಅರ್ಪಿತಾ ಬ್ರಹ್ಮಾವರ, ಭೌತಚಿಕಿತ್ಸಕರಾದ ಯಶಸ್ವಿನಿ ವಿ. ಹಾಗೂ ಹೇಮಾ ಪಿ. ನೀಡಿದರು.

ಜಾಗೃತಿ ಮೂಡಿಸಲು ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ಭೌತಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯುಕ್ತ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ಸಂತೋಷ ಕಾರ್ಯ ಕ್ರಮ ನಿರೂಪಿಸಿದರು. ಅರ್ಪಿತಾ ಬ್ರಹ್ಮಾವರ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor