ಕುಂದಾಪುರ, ಸೆ.10: ಅರಾಟೆ ರಾಷ್ಟ್ರೀಯ ಹೆದ್ದಾರಿ 66ರ ಹಳೆ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ಸುರಕ್ಷತೆಗಾಗಿ ಹೆಮ್ಮಾಡಿ ಸಮೀಪದ ಮೂವತ್ತುಮುಡಿ ಕ್ರಾಸ್‌ನಿಂದ ಅರಾಟೆ ಸೇತುವೆವರೆಗೆ ರಿಫ್ಲೆಕ್ಟರ್ ಇರುವ ಕೋನ್ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ.

ಅರಾಟೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಹಳೆ ಸೇತುವೆಯನ್ನು ಪುನರ್ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು ಹೊಸ ಸೇತುವೆಯಲ್ಲಿ ಎರಡು ಕಡೆ ಸಾಗುವ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಪಘಾತಗಳು ಸಂಭವಿಸಿದ್ದವು.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನಿರ್ದೇಶನದಲ್ಲಿ, ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಬೈಂದೂರು ಪೊಲೀಸ್ ವೃತ್ತನಿರೀಕ್ಷಕರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಪವನ್ ನಾಯಕ್ ಸೂಚನೆಯಂತೆ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿದ ಐಆರ್‌ಬಿ ಕಂಪೆನಿಯು ಹೆಮ್ಮಾಡಿ ಸಮೀಪದ ಮೂವತ್ತುಮುಡಿ ಕ್ರಾಸ್‌ನಿಂದ ಅರಾಟೆ ಸೇತುವೆವರೆಗೆ ರಿಫ್ಲೆಕ್ಟರ್ ಇರುವ ಕೋನ್ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ.

ಸುಮಾರು 2 ಕಿ.ಮೀ. ವ್ಯಾಪ್ತಿಗೆ ಹೆದ್ದಾರಿಯಲ್ಲಿ ಹತ್ತು ಅಡಿ ಅಂತರದಲ್ಲಿ ಕೋನ್ ಅಳವಡಿಸಲಾಗುತ್ತಿದ್ದು 200 ಕೋನ್ ಬಳಸಲಾಗುತ್ತಿದೆ. ರಸ್ತೆ ಲೇನ್ ಶಿಸ್ತನ್ನು ಸುಧಾರಿಸಲು, ಅನಧಿಕೃತ ಹಾಗೂ ಅಕ್ರಮ ಯು-ಟರ್ನ್‌ಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು, ಹಾಗೆಯೇ ಅಪಾಯ ಕಾರಿ ಪ್ರದೇಶಗಳಲ್ಲಿ ಹೆದ್ದಾರಿ ಮಧ್ಯದ ಮಾರ್ಗದ ಉದ್ದಕ್ಕೂ ಹೆಚ್ಚು ಗೋಚರಿಸುವ ರಿಪ್ಲೆಕ್ಟರ್ ಅಳವಡಿಸುವ ಯೋಜನೆಯೂ ಇದೆ ಎಂದು ಗಂಗೊಳ್ಳಿ ಪಿಎಸ್‌ಐ ಪವನ್ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor