ಸೆ.12: ಕಾಂಗ್ರೆಸ್ನಿಂದ ಮೌನ ಮೆರವಣಿಗೆ, ಗಾಂಧಿ ಪ್ರತಿಮೆ ಎದುರು ಧರಣಿ
ʼಬಿಜೆಪಿ ಅಸ್ಪಶ್ಯತಾ ಆಚರಣೆ ವಿರುದ್ಧ ಪ್ರತಿಭಟನೆʼ
ಉಡುಪಿ, ಸೆ.10:ಕಾಂಗ್ರೆಸ್ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಬಿಜೆಪಿ ಕಾರ್ಯಕರ್ತರು ಶುದ್ದೀಕರಿಸಿರುವುದು ದೇಶವನ್ನು 18ನೇ ಶತಮಾನಕ್ಕೆ ಕೊಂಡೊಯ್ಯುವ ಬಿಜೆಪಿಯ ಹುನ್ನಾರದ ದ್ಯೋತಕವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ನ ದಲಿತ ರಾಷ್ಟ್ರೀಯ ನಾಯಕರನ್ನು ಅವಮಾನಿಸುವ ಉದ್ದೇಶದಿಂದ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ದೀಕರಿಸಿರುವುದು ದೇಶದ 140 ಕೋಟಿ ಜನರಿಗೆ ಬಿಜೆಪಿ ಹಾಗೂ ಸಂಘ ಪರಿವಾರ ಮಾಡಿದ ಅವಮಾನ ವಾಗಿದೆ. ಇದು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅವರು ನೀಡಿದ ಸಂವಿಧಾನಕ್ಕೆ ಮಾಡಿದ ಅವಮಾನವೂ ಹೌದು. ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಮತ್ತೆ ಸೃಷ್ಟಿಸುವ ಸಂಘ ಪರಿವಾರದ ಇಂತಹ ಪ್ರಯತ್ನಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸೊರಕೆ ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಅವಮಾನಿಸಲಾಗುತ್ತಿದೆ. ಕಳ್ಳರಿಗೆ ರಕ್ಷಣೆ ನೀಡುವುದು ಮೋದಿ ಸರ್ಕಾರದ ಸಾಧನೆ ಎಂದು ಅವರು ಲೇವಡಿ ಮಾಡಿದರು.
ಈ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತಿದ್ದು, ಇದರ ಅಂಗವಾಗಿ ನಡೆದಿದ್ದು, ಸೆ.12 ರಂದು ಪಕ್ಷ ರಾಜ್ಯಾದ್ಯಂತ ಮೌನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಿದೆ. ಉಡುಪಿಯಲ್ಲೂ ಮೌನ ಮೆರವಣಿಗೆ ಹಾಗೂ ಅಜ್ಜರಕಾಡಿನಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ನಿಯುಕ್ತ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಪ್ರಚಾರ ಸಮಿತಿ ಪ್ರಮುಖರಾದ ಡಾ. ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಪೂಜಾರಿ, ರಾಜೇಶ್ ಶೆಟ್ಟಿ, ದಿನಕರ ಶೆಟ್ಟಿ, ದಯಾನಂದ, ಚಂದ್ರಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.