ಹಿರಿಯ ನಾಗರಿಕರ ಪೋಷಣೆ, ರಕ್ಷಣೆಗಾಗಿಯೇ ರಕ್ಷಣಾ ಕಾಯ್ದೆ-2007 ಜಾರಿ: ನ್ಯಾ.ಕಿರಣ್ ಸಿದ್ದಪ್ಪ ಗಂಗಣ್ಣನವರ್
ಉಡುಪಿ, ಸೆ.10: ಆಧುನಿಕ ಜೀವನ ಶೈಲಿ, ತಂತ್ರಜ್ಞಾನದ ಬೆಳವಣಿಗೆ, ನಗರೀಕರಣ, ವಿಭಕ್ತ ಕುಟುಂಬ ಪದ್ಧತಿ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗುತಿ ದ್ದಾರೆ. ಅವರಿಗೆ ಪೋಷಣೆ ಮತ್ತು ರಕ್ಷಣೆ ಅತ್ಯವಶ್ಯಕವಾಗಿ ಬೇಕಾಗಿದೆ. ಇಂತಹ ಹಿರಿಯ ನಾಗರಿಕರ ರಕ್ಷಣೆಗಾಗಿಯೇ ‘ಪಾಲಕರ ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007’ನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಸಿದ್ದಪ್ಪ ಗಂಗಣ್ಣನವರ್ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಉಡುಪಿ ಜಿಲ್ಲೆ ಇವರ ಸಹಯೋಗ ದೊಂದಿಗೆ ತಂದೆ- ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ -ಪೋಷಣೆ ಮತ್ತು ಕಲ್ಯಾಣ ಅಧಿನಿಯಮ - 2007ರ ಕುರಿತು ಅಧಿಕಾರಿಗಳಿಗೆ ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಆಯೋಜಿಸಲಾದ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
‘ಪಾಲಕರ ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007’ ನಿರಾಶ್ರಿತ ಪೋಷಕರ ಹಾಗೂ ಹಿರಿಯ ನಾಗರಿಕರ ಹಿತರಕ್ಷಣೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ. ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಸರಕಾರ ಜಾರಿಗೊಳಿಸಿರುವ ಕಾಯಿದೆ ಹಾಗೂ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಅರಿವಿದ್ದಾಗ ಮಾತ್ರ ಹಿರಿಯರ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ಈ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಹಿರಿಯ ಜೀವಗಳು ತಮ್ಮ ಬದುಕಿನ ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ಜೀವಿಸಲು ಅನುವು ಮಾಡಿಕೊಡಬೇಕು. ಮನುಷ್ಯ ತನ್ನ ಜೀವನದಲ್ಲಿ ಬಾಲ್ಯ, ಯೌವ್ವನ ಹಾಗೂ ವೃದ್ಧಾಪ್ಯನಾಗುವವರೆಗೆ ಸಮಾಜದ ಅನೇಕ ಮುಖಗಳನ್ನು ನೋಡಿರುತ್ತಾನೆ. ಸಾಮಾಜಿಕ ಜೀವನ ಶೈಲಿ, ಸುಖ-ದುಃಖ, ಕಷ್ಟ -ನಷ್ಟ ಸೇರಿದಂತೆ ಬದುಕಿನ ಎಲ್ಲಾ ಹಂತಗಳನ್ನು ಸವಾಲಾಗಿ ಸ್ವೀಕರಿಸುವ ವಿವೇಕ ಹಿರಿಯ ಚೇತನರಲ್ಲಿ ಇರುತ್ತದೆ. ಕಿರಿಯರ ಮಾರ್ಗದರ್ಶಕರಾಗಿ ಹಿರಿಯ ನಾಗರಿಕರು ಗೌರವಯುತ ಜೀವನ ನಡೆಸು ವಂತಾಗಬೇಕು ಎಂದರು.
ಹಿರಿಯ ನಾಗರಿಕರ ನಿರ್ಲಕ್ಷ್ಯ ಹಾಗೂ ಅವರ ಮೇಲಾಗುವ ದೌರ್ಜನ್ಯ ತಡೆಗಟ್ಟಲು ಕಾಯಿದೆಗಳು ಸಹಕಾರಿ. ಅಧಿಕಾರಿಗಳು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ಕಾರ್ಯಾ ಗಾರದ ಆಯಾಮಗಳನ್ನು ತಿಳಿದುಕೊಂಡು ತಳಮಟ್ಟದಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಈ ಸಂದರ್ಭ ದಲ್ಲಿ ಕಾನೂನಿನ ಅರಿವು ಮೂಡಿಸುವ ಜೊತೆಗೆ ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಅತೀ ಮುಖ್ಯ ಎಂದು ಗಂಗಣ್ಣನವರ್ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಕ್ಕಳನ್ನು ಚಿಕ್ಕಂದಿ ನಿಂದ ಪ್ರೀತಿ ಕಾಳಜಿಯಿಂದ ಬೆಳೆಸಿ, ಜೀವನ ರೂಪಿಸಿಕೊಳ್ಳಲು ಸಾಕಷ್ಟು ಏರಿಳಿತಗಳನ್ನು ಅನುಭವಿಸುವ ಹಿರಿಯ ನಾಗರಿಕರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಯಾವುದೇ ಕಾಯ್ದೆಯನ್ನು ಅನುಷ್ಠಾನಗೊಳಿಸುವಾಗ ಕಾನೂನಿನೊಂದಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದಲ್ಲಿ ಹಿರಿಯ ನಾಗರಿಕರ ಬದುಕಿಗೆ ಆಸರೆಯಾಗಲಿದೆ ಎಂದ ಗದ್ಯಾಳ್, ಕಾಯ್ದೆಗಳ ಕುರಿತು ವಿಶೇಷವಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರೇಮಮೂರ್ತಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಜೀವನ ಶೈಲಿಯಿಂದ ಪ್ರಸ್ತುತ ಹಿರಿಯ ನಾಗರಿಕರ ಸಂಖ್ಯೆಯೊಂದಿಗೆ ಅವರನ್ನು ನೋಡಿಕೊಳ್ಳುವ ವೃದ್ಧಾಶ್ರಮಗಳು, ಹಿರಿಯ ನಾಗರಿಕರ ಆಶ್ರಯ ಕೇಂದ್ರಗಳ ಸಂಖ್ಯೆಯೂ ಹೆಚ್ಚುತ್ತಿರುವುದು ವಿಷಾಧನೀಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ಯಶ್ವಂತ್ ರಾವ್ ಕಾನೂನು ಅನುಷ್ಠಾನದಲ್ಲಿ ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಪರಿಣಾಮಗಳ ಕುರಿತು, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಅವರು ಪ್ರಕರಣ ಅಧ್ಯಯನ - ಜಿಲ್ಲೆಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳ ವಿಶ್ಲೇಷಣೆ ಮುಂತಾದ ವಿಷಯ ಮಂಡಿಸಿದ್ದು, ಚರ್ಚೆ ನಡೆಯಿತು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಅಧಿಕಾರಿ ಎಂ ನಿರಂಜನ್ ಭಟ್ ಅವರು ಎಂ.ಡಬ್ಲ್ಯೂಪಿ.ಎಸ್ ಆಕ್ಟ್ -2007ರ ಉದ್ದೇಶ ಹಾಗೂ ನಿರ್ವಹಣೆ, ನ್ಯಾಯ ಮಂಡಳಿಯ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಹಿರಿಯ ನಾಗರಿಕರ ವೇದಿಕೆ ಜಿಲ್ಲಾ ಹಾಗೂ ತಾಲೂಕು ಒಕ್ಕೂಟದ ಪದಾಧಿಕಾರಿಗಳು, ವೃದ್ಧಾಶ್ರಮಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸ್ವಾಗತಿಸಿ, ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.