ಉಡುಪಿ, ಸೆ.19: ಯಕ್ಷಗಾನ ರಂಗದಲ್ಲಿ ಮುಡಾರೆ ಎಂದೇ ಪರಿಚಿತ ರಾಗಿದ್ದ ಮುಡಾರೆ ಸೀತಾರಾಮ ಹೆಗಡೆ(63) ಗುರುವಾರ ನಿಧನರಾದರು. ಅವರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ.

ಮೂಲತಃ ಹೊನ್ನಾವರದ ಹೊಸಾಕುಳಿಯವರಾದ ಸೀತಾರಾಮ ಹೆಗಡೆ ಮಂಕಿ ಸಮೀಪದ ಮುಂಡಾರದಲ್ಲಿ ವಾಸಿಸುತ್ತಿದ್ದರು. ಹದಿನಾರರ ಹರೆಯದಲ್ಲೇ ಕಲೆಯ ಮೇಲಣ ಸೆಳೆತದಿಂದ ಈ ಕ್ಷೇತ್ರಕ್ಕೆ ಬಂದ ಇವರಿಗೆ ಕೋಟ ಶಿವರಾಮ ಕಾರಂತ ಮತ್ತು ಕೆರೆಮನೆ ಶಂಭು ಹೆಗಡೆ ಅವರ ಮಾರ್ಗದರ್ಶನ ಲಭಿಸಿತು. ನಾಗರಕೋಡಿಗೆ, ಗುಂಡಬಾಳ, ಕೆರೆಮನೆ, ಬಚ್ಚಗಾರು, ಕುಮಟಾ ಮೇಳಗಳಲ್ಲಿ ಕಲಾಸೇವೆ ಮಾಡಿದ್ದರು. ದೀರ್ಘಕಾಲ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು.

ಹಾಸ್ಯ ಪಾತ್ರಗಳಲ್ಲಿ ವಿಶೇಷ ಸಿದ್ಧಿ, ಪ್ರಸಿದ್ಧಿ ಪಡೆದಿದ್ದ ಮುಡಾರೆ, ಪುರುಷ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸ ಬಲ್ಲ ಸಾಮರ್ಥ್ಯ ಹೊಂದಿದ್ದರು. ಕಲಾಸಂಘಗಳನ್ನು ಸ್ಥಾಪಿಸಿ ಹಲವು ಮಕ್ಕಳಿಗೆ ತರಬೇತಿ ನೀಡಿ ಹಲವರು ಈ ಕ್ಷೇತ್ರಕ್ಕೆ ಬರಲು ಕಾರಣರಾಗಿದ್ದರು. ಪ್ರಸಾಧನ ತಜ್ಞರಾಗಿ, ಸಂಗ್ರಾಹಕ ರಾಗಿಯೂ ಯಕ್ಷಗಾನಕ್ಕೆ ಅವರ ಕೊಡುಗೆ ಸಂದಿದೆ.

ಸೀತಾರಾಮ ಹೆಗಡೆ ನಿಧನಕ್ಕೆ ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor